ಬೆಂಗಳೂರು:''ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಉದ್ದೇಶದಿಂದ ಸಿ.ಪಿ. ಯೋಗೇಶ್ವರ್ ಅವರು ಇಂದು ಕಾಂಗ್ರೆಸ್ ತತ್ವ, ಸಿದ್ಧಾಂತ, ನಾಯಕತ್ವ ಒಪ್ಪಿ ಸ್ವಇಚ್ಛೆಯಿಂದ ಪಕ್ಷ ಸೇರಿದ್ದಾರೆ'' ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಯೋಗೇಶ್ವರ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ''ಪಕ್ಷಕ್ಕೆ ಯಾರೇ ಬಂದರೂ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದಾಗಿ ಹೇಳಿದ್ದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಾಯಕತ್ವವನ್ನು ಒಪ್ಪಿ, ಅವರ ಮೇಲೆ ವಿಶ್ವಾಸವಿಟ್ಟು ಯೋಗೇಶ್ವರ್ ಸ್ವಇಚ್ಛೆಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಮನೆಗೆ ಬಂದ ಅತಿಥಿಯನ್ನು ನಾವು ಸ್ವಾಗತ ಮಾಡಿದ್ದೇವೆ'' ಎಂದ ಅವರು, ಅತಿಥಿಯು ಉಪಚುನಾವಣೆ ಅಭ್ಯರ್ಥಿಯಾಗುತ್ತಾರಾ ಎಂದು ಕೇಳಿದಾಗ, ''ಅದನ್ನು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ನಾಯಕರು ತೀರ್ಮಾನಿಸಲಿದ್ದಾರೆ' ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಿ.ಪಿ. ಯೋಗೇಶ್ವರ್ ಅನಿವಾರ್ಯವಾದರೇ ಎಂಬ ಪ್ರಶ್ನೆಗೆ, ''ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ತತ್ವ, ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ನಾವು ಮುಕ್ತವಾಗಿ ಸ್ವಾಗತ ಮಾಡುತ್ತೇವೆ. ಯೋಗೇಶ್ವರ್ ಅವರು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಆರಂಭಿಸಿದವರು'' ಎಂದು ತಿಳಿಸಿದರು.
ಯೋಗೇಶ್ವರ್ ಬುಧವಾರ ತಡರಾತ್ರಿವರೆಗೂ ಬಿಜೆಪಿ ಟಿಕೆಟ್ಗಾಗಿ ಕಾಯುತ್ತಿದ್ದರು ಎಂದು ಕೇಳಿದಾಗ, ''ಯೋಗೇಶ್ವರ್ ಇಂದು ಬೆಳಗ್ಗೆ 8 ಗಂಟೆಗೆ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದಾಗ, ನಾನು ಅಲ್ಲಿಗೆ ಹೋಗಿ ಸ್ವಾಗತ ಮಾಡಿದೆ. ಅವರು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಕಾರ್ಯಕರ್ತನಂತೆ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ನಂತರ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರ ಗಮನಕ್ಕೆ ತಂದು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ'' ಎಂದರು.