ಬೆಂಗಳೂರು: ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುದಾನ ಲಭ್ಯತೆಯ ಅನುಗುಣವಾಗಿ 2027ರ ಮಾರ್ಚ್ 31ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಬಿ. ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈ ಯೋಜನೆಯಡಿ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಅಡಿ ಪ್ರಮಾಣದ ಪ್ರವಾಹದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಹರಿಸಲು ಯೋಜಿಸಲಾಗಿದೆ ಎಂದರು.
ಈ ಯೋಜನೆಯಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಲು ಉದ್ದೇಶಿಸಿಲ್ಲ. ಎಲ್ಲ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ 7 ವಿಯರ್ಗಳಿಂದ ಜುಲೈ ಅಂತ್ಯಕ್ಕೆ ನೀರನ್ನೆತ್ತಿ ಪ್ರಾಯೋಗಿಕವಾಗಿ ಚಾಲನೆಗೊಳಿಸಿ ಗುರುತ್ವ ಕಾಲುವೆಯ ಸರಪಳಿ 42 ಕಿ.ಮೀ.ವರೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ನವೆಂಬರ್ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ 42 ಕಿ.ಮೀ. ನಿಂದ 231 ಕಿ.ಮೀ. ತುಮಕೂರುವರೆಗೆ ನಾಲೆಗೆ ನೀರನ್ನು ಹರಿಸುವುದು ಮತ್ತು ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಕಾಮಗಾರಿಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದರು.
2025ರ ನವೆಂಬರ್ ಅಂತ್ಯಕ್ಕೆ ಗರುತ್ವ ಕಾಲುವೆ 231ಕಿ.ಮೀ. ನಿಂದ ಸರಪಳಿ 261.69 ಕಿ.ಮೀ.ವರೆಗೆ ಗೌರಿಬಿದನೂರು, ಟಿ.ಜಿ.ಹಳ್ಳಿ-ರಾಮನಗರ ಪೀಡರ್ ಒಳಗೊಂಡಂತೆ ನಾಲೆಗೆ ನೀರು ಹರಿಸುವುದು ಮತ್ತು ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಶೇ.50ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜಿಸಿರುವುದಾಗಿ ಹೆಳಿದರು.
2026ರ ನವೆಂಬರ್ ಅಂತ್ಯಕ್ಕೆ ಲಕ್ಕೇನಹಳ್ಳಿಗ ಸಮತೋಲನಾ ಜಲಾಶಯದ ಬಾಕಿ ಶೇ.50ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ನಂತರ ಎಲ್ಲಾ ಪೀಡರ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರನ್ನು ಒದಗಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಎತ್ತಿನಹೊಳೆ ಅನುಮೋದಿತ ಯೋಜನಾ ವರದಿಯಲ್ಲಿ ಪಾಲಾರ್, ಉತ್ತರ ಪೆನ್ನಾರ್ ಮತ್ತು ದಕ್ಷಿಣ ಪೆನ್ನಾರ್ ನದಿಗಳ ವ್ಯಾಪ್ತಿಯಲ್ಲಿ ಬರುವ ಸಣ್ಣ ನೀರಾವರಿ ಕೆರೆಗಳನ್ನು ಪರಿಗಣಿಸಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಕುಂಬರಹಳ್ಳಿ, ಅನುಪನಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಪರಿಗಣಿಸಿಲ್ಲ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಇಲ್ಲ :ಉದ್ದೇಶಿತ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಮಾಗಡಿ, ಬಿಡದಿಯನ್ನು ಸೇರಿಸುವುದಿಲ್ಲವೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಶಾಸಕ ಧೀರಜ್ ಮುನಿರಾಜು ಕೇಳಿದ ಪ್ರಶ್ನೆಗೆ ಇದೇ ವೇಳೆ ಉತ್ತರಿಸಿದರು.
ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಮಾಗಡಿ, ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್ ಶಿಪ್ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು. ಈ ವಿಚಾರ ಬಜೆಟ್ನಲ್ಲಿ ಘೋಷಣೆಯಾಗಿದ್ದು, ಜುಲೈ 16 ರಂದು ಆರ್ಥಿಕ ಇಲಾಖೆ ತಾತ್ವಿಕ ಅನುಮೋದನೆಗೆ ಸಹಮತಿ ನೀಡಿದೆ. ಈ ಯೋಜನೆಯ ಬಗ್ಗೆ ಸಾಂಖ್ಯಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಗ್ರೇಟರ್ ಬೆಂಗಳೂರಿಗೆ 110 ಹಳ್ಳಿಗಳನ್ನು ಈಗಾಗಲೇ ಸೇರಿಸಲಾಗಿದೆ. ಸದ್ಯಕ್ಕೆ ಹೊಸ ಸೇರ್ಪಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಇಡಿ ವಿರುದ್ಧದ ದೂರಿನ ಕುರಿತು ನಿಲುವಳಿ ಸೂಚನೆಗೆ ಮುಂದಾದ ಕಾಂಗ್ರೆಸ್: ಬಿಜೆಪಿ ಆಕ್ಷೇಪ, ಪರಿಷತ್ನಲ್ಲಿ ಗದ್ದಲ - Legislative Council