ಶಿವಮೊಗ್ಗ:ಪುತ್ರ ಕಾಂತೇಶ್ಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಣ ಎಂದು ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಈ ಕುರಿತು ಈಟಿವಿ ಭಾರತದ ಜಿಲ್ಲಾ ಪ್ರತಿನಿಧಿ ಜೊತೆ ಮಾತನಾಡಿದ ಅವರು, ನನ್ನ ಮಗ ಕಾಂತೇಶ್ಗೆ ಟಿಕೆಟ್ ತಪ್ಪಿಸಲು ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಕಾರಣ. ಕಾಂತೇಶನಿಗೆ ಟಿಕೆಟ್ ಕೊಡಿಸಿ, ಕ್ಷೇತ್ರದಲ್ಲಿ ಓಡಾಡಿ ಗೆಲ್ಲಿಸಿಕೊಂಡು ಬರುವುದಾಗಿ ಯಡಿಯೂರಪ್ಪನವರು ಈ ಹಿಂದೆ ಮಾತು ಸಹ ಕೊಟ್ಟಿದ್ದರು. ಆದರೆ, ಟಿಕೆಟ್ ಕೊಡಿಸದೇ ಮೋಸ ಮಾಡಿದರು ಎಂದು ಈಶ್ವರಪ್ಪ ದೂರಿದ್ದಾರೆ.
ಆದರೆ, ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 400 ಸೀಟುಗಳ ಗೆಲುವಿಗೆ ನಮ್ಮ ನಡೆಯಿಂದ ಯಾವುದೇ ತಡೆ ಆಗಲ್ಲ. ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ, ರಾಜ್ಯದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಲ್ಲಿ ನೋವು ಇದೆ. ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ತೆಗೆದುಕೊಳ್ಳುವ ನಿರ್ಧಾರಗಳು ಸರಿ ಇಲ್ಲ ಅಂತ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾವು 102 ರಿಂದ 66 ಸ್ಥಾನಕ್ಕೆ ಬಂದಿದ್ದೇವೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಏನಾಗುತ್ತದೆ ಎಂಬ ಭಯ ಶುರುವಾಗಿದೆ. ಆದರೂ ಕೂಡ ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗದು. ನಾವೆಲ್ಲರೂ ನರೇಂದ್ರ ಮೋದಿ ಅವರ ಜೊತೆಗೆ ಇರುತ್ತೇವೆ. ಅವರು ಮತ್ತೆ ಪ್ರಧಾನಿ ಆಗ್ತಾರೆ ಎಂದರು.