ಬೆಂಗಳೂರು:ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರವೇಶದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕಗ್ಗಂಟಾಗಿದ್ದ ಸಮಸ್ಯೆ ಬಗೆಹರಿದಿದೆ. ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರನಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಚಂದ್ರಪ್ಪನವರ ಪುತ್ರ ರಘುಚಂದನ್ ಲೋಕಸಭೆಗೆ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯ ಬಳಿಕ ಶಾಸಕ ಚಂದ್ರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದ ಕೆಲಸ ಮಾಡುತ್ತೇವೆ, ಅದು ಅನಿವಾರ್ಯ. ಗೋವಿಂದ ಕಾರಜೋಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ. ಪುತ್ರನಿಗೆ ಪಕ್ಷದಲ್ಲಿ ಮುಂದೆ ಉತ್ತಮ ಅವಕಾಶ ಕೊಡುವ ವಿಶ್ವಾಸವಿದೆ ಎಂದು ಹೇಳಿದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ನಮಗೆ ಯಾವತ್ತೂ ಅನ್ಯಾಯ ಮಾಡಿದವರಲ್ಲ. ಹಿರಿಯ ನಾಯಕರಾದ ಯಡಿಯೂರಪ್ಪನವರು ನಮ್ಮ ಜತೆ, ನಮ್ಮ ಬೆಂಬಲಿಗರ ಜತೆ ಮಾತನಾಡಿದ್ದಾರೆ. ಅವರ ಮಾತಿಗೆ ಗೌರವ, ಮರ್ಯಾದೆ ಕೊಟ್ಟು ನನ್ನ ಮಗ ಪಕ್ಷೇತರ ಸ್ಪರ್ಧೆ ಮಾಡಲ್ಲ. ನಾವು ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಘುಚಂದನ್ ಮಾತನಾಡಿ, ಯಡಿಯೂರಪ್ಪನವರ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ ಅವರು ನಮಗೆ ಗಾಡ್ ಫಾದರ್ ಇದ್ದಂತೆ. ಅವರ ನೆರಳಲ್ಲೇ ನಾವು ರಾಜಕೀಯಕ್ಕೆ ಬಂದವರು. ಅವರನ್ನು ನಂಬಿ ಬಿಜೆಪಿಗೆ ಬಂದಿರೋದು. ಕೆಜೆಪಿ ಕಟ್ಟಿದಾಗ, ಮತ್ತೆ ಬಿಜೆಪಿಗೆ ಬಂದಾಗ ಅಚಲವಾಗಿ ನಿಂತಿದ್ದೆವು ಎಂದು ಹೇಳಿದರು.
ಇದನ್ನೂ ಓದಿ:ಮಾಜಿ ಸಚಿವ ಡಾ.ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಲೋಕಾಯುಕ್ತಕ್ಕೆ ದೂರು - LOKAYUKTA