ಕಾರವಾರ: "ಹಣ್ಣು ಮತ್ತು ತರಕಾರಿ ತುಂಬಿಕೊಂಡು ವ್ಯಾಪಾರಸ್ಥರೊಂದಿಗೆ ತೆರಳುತ್ತಿದ್ದ ಲಾರಿ ಇಂದು ಮುಂಜಾನೆ ಕಂದಕಕ್ಕೆ ಬಿದ್ದು 10 ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಲಾರಿ ಬಿದ್ದಿರುವ ಸ್ಥಳ ಸಾಮಾನ್ಯವಾಗಿ ಯಾರಿಗೂ ಕಾಣುವುದಿಲ್ಲ. ಆದರೆ, ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿ ಅಡಿ ಸಿಲುಕಿದ್ದವರನ್ನು ಹೊರ ತೆಗೆದು ಗಂಭೀರ ಗಾಯಗೊಂಡಿದ್ದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವ ಕಾಪಾಡಿದ್ದಾರೆ" ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.
"ಹಾವೇರಿಯ ಸವಣೂರಿನಿಂದ ಮಂಗಳವಾರ ತಡರಾತ್ರಿ ಹಣ್ಣು ಹಾಗೂ ತರಕಾರಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಶಿರಸಿ ಕುಮಟಾ ಹೆದ್ದಾರಿ ಬಂದ್ ಆದ ಕಾರಣ ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ ಮಾರ್ಗವಾಗಿ ಕುಮಟಾದ ಸಂತೆಗೆ ತೆರಳುತ್ತಿದ್ದರು. ಮುಂಜಾನೆ ನಾಲ್ಕು ಗಂಟೆ ವೇಳೆಗೆ ಯಲ್ಲಾಪುರದ ಅರೆಬೈಲ್ ಘಟ್ಟ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಂದಕಕ್ಕೆ ಉರುಳಿದೆ ಎನ್ನಲಾಗುತ್ತಿದೆ. ಮುಂಜಾನೆ ಇಬ್ಬನಿ ಹೆಚ್ಚಿದ್ದರಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿರಬಹುದು. ಆದರೆ, ಇದು ತನಿಖೆಯಿಂದ ತಿಳಿದುಬರಬೇಕಿದೆ. ಮೇಲ್ನೋಟಕ್ಕೆ ಈ ಅಪಘಾತ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಗಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಬಳಿಕ ನಿಖರ ಮಾಹಿತಿ ತಿಳಿಯಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, "ಇನ್ನು ಹಾವೇರಿಯ ಸವಣೂರು ಭಾಗದ ಬಹುತೇಕರು ಪ್ರತಿ ವಾರವೂ ಸಂತೆಗಾಗಿ ಈ ಭಾಗಕ್ಕೆ ಬಂದು ವ್ಯಾಪಾರ ಮಾಡಿ ತೆರಳುತ್ತಿದ್ದರು. ಬಹುತೇಕರು ಬಡವರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಘಟನೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಲಾರಿಯಲ್ಲಿದ್ದ ತರಕಾರಿ ಹಾಗೂ ಹಣ್ಣಿನ ಮೇಲೆ ಮಲಗಿದ್ದಾಗ ಲಾರಿ ಪಲ್ಟಿಯಾಗಿದೆ. ಇದರಿಂದ ಎಲ್ಲರು ಲಾರಿ ಅಡಿ ಭಾಗದಲ್ಲಿ ಸಿಲುಕಿದ್ದರು. ಪೊಲೀಸರು ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಲಾರಿ ಅಡಿ ಸಿಲುಕಿದ್ದ ಕೆಲವರನ್ನು ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಘಟನೆಯನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದ ತಕ್ಷಣ ಐಜಿಪಿ, ಎಸ್ಪಿ, ಡಿಸಿ ಸೇರಿದಂತೆ ಎಲ್ಲ ಅಧಿಕಾರಿಗಳು ಆಸ್ಪತ್ರೆ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಸೂಕ್ತ ಚಿಕಿತ್ಸೆ ಸಿಗುವಂತೆ ವೈದ್ಯರು ಪ್ರಯತ್ನಿಸಿದ್ದಾರೆ. ಇದರಿಂದ ಹಲವರು ಗಂಭೀರ ಸ್ಥಿತಿಯಿಂದ ಪಾರಾಗಿದ್ದಾರೆ. ಸರ್ಕಾರ ಇದೀಗ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಘೋಷಣೆ ಮಾಡಿದ್ದು, ಈಗಾಗಲೇ ಚೆಕ್ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ" ಎಂದು ಶಾಸಕ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ: ಪ್ರಧಾನಿ ಮೋದಿ ಘಟನೆ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, "ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿ ಸಂಭವಿಸಿರುವುದು ತೀವ್ರ ದುಃಖ ತಂದಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ. ಮೃತರ ಪ್ರತಿ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF)ಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು" ಎಂದು ತಿಳಿಸಿದ್ದಾರೆ.