ಮೈಸೂರು:ಶರನ್ನವರಾತ್ರಿಯ ಆಯುಧ ಪೂಜೆ ದಿನವೇ ಮೈಸೂರು ಯದುವಂಶಕ್ಕೆ ಹೊಸ ಸದಸ್ಯನ ಆಗಮನವಾಗಿದ್ದು, ರಾಜವಂಶಸ್ಥರ ಕುಟುಂಬದಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿಗೆ ಗಂಡು ಮಗು ಜನಿಸಿದೆ. ದಂಪತಿಗೆ ಇದು ಎರಡನೇ ಗಂಡು ಮಗುವಾಗಿದೆ.
ಅರಮನೆಯಲ್ಲಿ ಶರನ್ನವರಾತ್ರಿ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಅಕ್ಟೋಬರ್ 3ರಂದು ಶರನ್ನವರಾತ್ರಿಯ ಮೊದಲ ದಿನ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ನಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಯದುವೀರ್ ಜೊತೆಗೆ ಮಡದಿ ತ್ರಿಷಿಕಾ ಕುಮಾರಿ ಒಡೆಯರ್ ಕೂಡ ಇದ್ದರು. ಈ ನಡುವೆ ಇಂದು ಆಯುಧ ಪೂಜೆಯಂದೇ ತ್ರಿಷಿಕಾ ಒಡೆಯರ್ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಯದಯವೀ್ ಒಡೆಯರ್ ಅವರೇ ಹಂಚಿಕೊಂಡಿದ್ದಾರೆ.
ಸಂತಸ ಹಂಚಿಕೊಂಡ ಯದುವೀರ್ ಒಡೆಯರ್ (ETV Bharat) ಸಂತಸ ಹಂಚಿಕೊಂಡ ಯದುವೀರ್ ಒಡೆಯರ್:"ನಮ್ಮ ಕುಲದೇವತೆ ಚಾಮುಂಡೇಶ್ವರಿ ಅಮ್ಮನವರ ಅಪಾರ ಕರುಣಾಕಟಾಕ್ಷದಿಂದ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮಗೆ ಗಂಡು ಮಗುವಿನ ಭಾಗ್ಯ ದೊರಕಿದೆ ಎಂದು ಘೋಷಿಸಲು ಸಂತಸಪಡುತ್ತೇನೆ. ಈ ಸಂತೋಷದ ಸಂದರ್ಭದಲ್ಲಿ ಪ್ರತಿಯೊಬ್ಬ ಹಿತೈಷಿಗೂ ನಮ್ಮ ಹೃತ್ಪೂರ್ವಕ ವಂದನೆಗಳು" ಎಂದು ಯದುವೀರ್ ಒಡೆಯರ್ ಸಂತಸ ಹಂಚಿಕೊಂಡಿದ್ದಾರೆ.
ಮೈಸೂರು ರಾಜವಂಶಸ್ಥರ ಕುಟುಂಬ (ETV Bharat) ಪೂಜೆಗಳಲ್ಲಿ ಭಾಗಿಯಾಗಿರುವ ಯದುವೀರ್ ಒಡೆಯರ್, ಆಯುಧ ಪೂಜೆ ಬಳಿಕ, ನಾಳೆ ಶನಿವಾರ ವಿಜಯದಶಮಿಯ ಯಾತ್ರೆ ಮುಗಿಸಿದ ನಂತರ ಶರನ್ನವರಾತ್ರಿಯ ಕಂಕಣ ಬಿಚ್ಚಲಿದ್ದಾರೆ. ರಾಜ ಪಾರಂಪರೆಯಲ್ಲಿ ಯಾವುದೇ ರೀತಿಯ ಸೂತಕಗಳು ಇರುವುದಿಲ್ಲ. ಆದ್ದರಿಂದ ಶರನ್ನವರಾತ್ರಿಯ ಪೂಜೆಗಳಿಗೂ ಯಾವುದೇ ಸೂತಕ ಇರುವುದಿಲ್ಲ ಎಂದು ಅರಮನೆಯ ಪುರೋಹಿತರೊಬ್ಬರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ: ಪಟ್ಟದ ಹಸು, ಆನೆ, ಕುದುರೆ, ಒಂಟೆಗಳಿಗೂ ಪೂಜೆ