ಉಪ್ಪಿನಂಗಡಿ(ದಕ್ಷಿಣ ಕನ್ನಡ):ಮೂರು ವರ್ಷದ ಹಿಂದೆ ನಡೆದ ತಂದೆಯ ಮರಣದ ಚಿಂತೆಯಲ್ಲಿದ್ದ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿತ್ತೊಟ್ಟು ಗ್ರಾಮದ ಅನಾಲು ಎಂಬಲ್ಲಿ ನಡೆದಿದೆ. ಗೋಳಿತ್ತೊಟ್ಟು ಗ್ರಾಮದ ಅನಾಲು ನಿವಾಸಿ ದಿ.ವಾಸಪ್ಪ ಗೌಡರವರ ಪುತ್ರ ಶ್ರೀಹರ್ಷ ಗೌಡ(21) ಆತ್ಮಹತ್ಯೆಗೆ ಶರಣಾಗಿರುವ ಯುವಕ.
ಈತ ಮೇ 4ರಂದು ರಾತ್ರಿ ಮನೆ ಸಮೀಪ ಚಿಕ್ಕಪ್ಪ ಶೀನಪ್ಪ ಗೌಡ ಎಂಬುವರ ಮಗಳ ಮದುವೆ ಔತಣಕೂಟವಿದ್ದ ಹಿನ್ನೆಲೆಯಲ್ಲಿ ಸಂಜೆಯ ತನಕ ಅಲ್ಲಿ ಕೆಲಸ ಮಾಡಿ ವಾಪಸ್ ಮನೆಗೆ ಬಂದಿದ್ದ. ಈತನ ಸಹೋದರ ಹರ್ಷಿತ್ ಮೇ 5ರಂದು ಬೆಳಗಿನಜಾವ 2.30 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತನ ತಂದೆ 3 ವರ್ಷ ಹಿಂದೆ ನಿಧನರಾಗಿದ್ದರು. ಅಂದಿನಿಂದಲೇ ಚಿಂತೆಯಲ್ಲಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಣ್ಣ ಹರ್ಷಿತ್ ಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ: ಮತ್ತೊಂದೆಡೆ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ. ಕಾಸರಗೋಡಿನ ಮಂಜೇಶ್ವರ ಬಂದ್ಯೋಡು ನಿವಾಸಿ ಮುಹಮ್ಮದ್ ನೌಫಾಲ್ (24) ಮೃತಪಟ್ಟ ಕೈದಿ. 2022ರ ಡಿಸೆಂಬರ್ನಲ್ಲಿ ಮುಹಮ್ಮದ್ ನೌಫಾಲ್ ಎನ್ಡಿಪಿಎಸ್ ಕಾಯ್ದೆಯಡಿ ಕೊಣಾಜೆ ಪೊಲೀಸರಿಂದ ಅರೆಸ್ಟ್ ಆಗಿದ್ದ. ಆ ನಂತರ ಮಂಗಳೂರು ಜೈಲಿನಲ್ಲಿದ್ದ. ಆತನಿಗೆ ಜಾಮೀನು ಕೊಡಿಸಲು ಯಾರೂ ಬಂದಿರಲಿಲ್ಲ. ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈ ಚಿಕಿತ್ಸೆಗೆಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಏಪ್ರಿಲ್ 25ರಂದು ದಾಖಲಿಸಲಾಗಿತ್ತು. ಮೇ 6ರಂದು ನಸುಕಿನ ವೇಳೆ 4 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ. ಅದೇ ಕೊಠಡಿಯಲ್ಲಿ ಇತರೆ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಹೊರಗಡೆ ಕಾವಲಿಗೆ ಪೊಲೀಸರಿದ್ದರು. ಅದರ ನಡುವೆಯೂ ಈತ ಸಾವಿಗೆ ಶರಣಾಗಿದ್ದ.
ಇದನ್ನೂ ಓದಿ:ಉನ್ನತ ವ್ಯಾಸಂಗದ ಕನಸು ಕಂಡಿದ್ದ ನವವಧು ಆತ್ಮಹತ್ಯೆ! - New bride commits suicide