ಹುಬ್ಬಳ್ಳಿ :ಮಾನವ ಜನ್ಮ ಅಶಾಶ್ವತ. ಆದರೆ ಭಗವಾನ್ ಆದಿನಾಥರ ಕಲ್ಲಿನ ಪ್ರತಿಮೆ ಶಾಶ್ವತ ಎಂದು ಸಾರುವ ವಿಶ್ವದ ಅತೀ ಎತ್ತರದ 405 ಅಡಿ ಎತ್ತರದ ಸುಮೇರು ಪರ್ವತ ಲೋಕಾರ್ಪಣೆಯಾಗಿದೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಉದ್ಘಾಟನೆ ಮಾಡಿದ್ದು, ಇದು ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುಮೇರು ಪರ್ವತಕ್ಕೆ ಜೈನ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಪರ್ವತದಲ್ಲಿ 24 ತೀರ್ಥಂಕರರ ಪ್ರಥಮ ಪೂಜೆ ಹಾಗೂ ತೀರ್ಥಂಕರ ಚಿಹ್ನೆಗಳ ನಾಮಕರಣ ಆಗಿದೆ ಎನ್ನುವ ನಂಬಿಕೆಯಿದೆ. ಇದರ ದ್ಯೋತಕವಾಗಿ 16 ಮಹಡಿಗಳ 405 ಅಡಿ ಎತ್ತರದ ಕಟ್ಟಡ ನಿರ್ಮಿಸಿ ಸುಮೇರು ಪರ್ವತ ಎಂದು ನಾಮಕರಣ ಮಾಡಲಾಗಿದೆ.
ಜೈನ ಧರ್ಮಕ್ಕೆ ಸಂಬಂಧಿಸಿದ ಇಷ್ಟೊಂದು ದೊಡ್ಡ ಕಟ್ಟಡ ಮತ್ತೊಂದು ಕಡೆಯಲ್ಲಿಲ್ಲ. ಹೀಗಾಗಿ ಇದೊಂದು ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ. ಕಟ್ಟಡದ ಪ್ರತಿಯೊಂದು ಮಹಡಿ ಒಂದೊಂದು ವಿಶೇಷತೆ ಹೊಂದಿದೆ. ಜೈನ ಧರ್ಮ, ಆಚರಣೆ, ತೀರ್ಥಂಕರರ ಜೀವನ ಚರಿತ್ರೆಯನ್ನು ಮೂರ್ತಿಗಳ ಸಮೇತ ಭಕ್ತರಿಗೆ ತಿಳಿಸುವ ಕೆಲಸ ಆಗಿದೆ.
ಯಾವ್ಯಾವ ಮಹಡಿಯಲ್ಲಿ ಏನೇನಿದೆ? : ಕಟ್ಟಡದ ಹೊರಭಾಗದಲ್ಲಿ 16 ಅರಿ ಹಂತರ ಪ್ರತಿಮೆ, ನೆಲಮಹಡಿಯಲ್ಲಿ ಸರಸ್ವತಿ ಮೂರ್ತಿ ಸೇರಿದಂತೆ ಭವ್ಯ ಅರಮನೆಯನ್ನು ಹೋಲುವಂತಹ ಸ್ಥಳವಿದೆ. 8 ಮಂತ್ರಗಳ ಬೃಹತ್ ಯಂತ್ರ ಪ್ರಭಾವಳಿಗಳು ಸೇರಿ 13 ಅಡಿ ಎತ್ತರದ ಅರಿಹಂತರ ಮೂರ್ತಿಗಳಿವೆ.
- 2ನೇ ಮಹಡಿಯಲ್ಲಿ 14 ಕುಲಕರರ ಪ್ರತಿಮೆ.
- 3ನೇ ಮಹಡಿಯಲ್ಲಿ ಆದಿನಾಥರ ಜೀವನ ಚರಿತ್ರೆ.
- 4ನೇ ಮಹಡಿಯಲ್ಲಿ ಸ್ವರ್ಗ, ನರಕ, ಮನುಷ್ಯ, ಪ್ರಾಣಿ ಪರಿಕಲ್ಪನೆಯ ವಿವರಣೆಯಿದೆ.
- 5ನೇ ಮಹಡಿಯಲ್ಲಿ ಭರತ ಬಾಹುಬಲಿಗಳ ಜೀವನ ಕುರಿತಾದ ಮಾಹಿತಿಯಿದೆ.
- 6ನೇ ಮಹಡಿಯಲ್ಲಿ ಭಗವಾನ್ ಪಾರ್ಶ್ವನಾಥ ಜೀವನದ ಪ್ರದರ್ಶನಾಲಯವಿದೆ.
- 7ನೇ ಮಹಡಿಯಲ್ಲಿ ಮಿರರ್ ಮ್ಯಾಜಿಕ್.
- 8ನೇ ಮಹಡಿಯಲ್ಲಿ ಪಾರ್ಶ್ವನಾಥರ ಕಷ್ಟದ ದಿನದ ವಿವರಣೆಗಳನ್ನು, ಮಹಡಿಯಲ್ಲಿ ತೀರ್ಥಂಕರರ ಪರಿಚಯ, ಅವರ ಜೀವನ ಕುರಿತಾದ ವಿವರಣೆ ದೊರೆಯಲಿದೆ.
- 10 ನೇ ಮಹಡಿಯಲ್ಲಿ ತೀರ್ಥಂಕರರ ಪರಿಚಯ, ಅವರ ಜೀವನ ಕುರಿತಾದ ವಿವರಣೆ ದೊರೆಯಲಿದೆ.
- 11ನೇ ಮಹಡಿಯಲ್ಲಿ ಪಂಚ ಕಲ್ಯಾಣ ವೈಭವ ದರ್ಶನದ ಮಾಹಿತಿಯಿದೆ. ನೆಲ ಮಹಡಿಯಿಂದ ತುದಿಯವರೆಗೂ ಹೋಗಲು ಮೆಟ್ಟಿಲು ಹಾಗೂ ಲಿಫ್ಟ್ ಸೌಲಭ್ಯವಿದೆ. ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೆಡೆ ಮೂರ್ತಿಗಳನ್ನು ಕೂರಿಸುವುದು ಸೇರಿದಂತೆ ಇನ್ನೂ ಕಾಮಗಾರಿ ಬಾಕಿಯಿದೆ.
ಈ ಕುರಿತಂತೆ ಜೈನ ಸಮಾಜದ ಪ್ರಮುಖ ಮಹೇಂದ್ರ ಸಿಂಘಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಸತ್ಯ, ಅಹಿಂಸೆ, ಮಾನವೀಯತೆ ಸಾರುವಂತಹ ಮೇರು ಪರ್ವತವೇ ಸುಮೇರು ಪರ್ವತ. ಇದು 405 ಅಡಿ ಎತ್ತರವಿದೆ. ಇದು ವಿಶ್ವ ದಾಖಲೆ ನಿರ್ಮಿಸಿದೆ. ರಾಷ್ಟ್ರ ಸಂತ ಗುಣಧರನಂದಿ ಮಹಾರಾಜರ ದಿವ್ಯ ಸನ್ನಿಧಿಯಲ್ಲಿ ಅವರ ನೇತೃತ್ವದಲ್ಲಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಿರ್ಮಿಸಲಾಗಿದೆ'' ಎಂದರು.