ಕರ್ನಾಟಕ

karnataka

ETV Bharat / state

ಜೀವಂತ ಇರುವಾಗಲೂ ಅಂಗಾಂಗ ದಾನ ಮಾಡಬಹುದು: ಡಾ.ಮಯೂರ್ ವಿ.ಪ್ರಭು - World Organ Donation Day

ಬ್ರೈನ್​ ಡೆಡ್​ ಆದ ಮೇಲೆ ಮಾತ್ರವಲ್ಲ, ಜೀವಂತವಿರುವಾಗಲೂ ನಾವು ಅಂಗಾಂಗ ದಾನ ಮಾಡಬಹುದು ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಮಯೂರ್ ವಿ.ಪ್ರಭು ತಿಳಿಸಿದ್ದಾರೆ.

World Organ Donation Day
ವಿಶ್ವ ಅಂಗಾಂಗ ದಾನ ದಿನಾಚರಣೆ (ETV Bharat)

By ETV Bharat Karnataka Team

Published : Aug 13, 2024, 5:03 AM IST

ಮಂಗಳೂರು: ಪ್ರತೀ ವರ್ಷ ಆಗಸ್ಟ್ 13ರಂದು ವಿಶ್ವ ಅಂಗಾಂಗ ದಾನ ದಿನಾಚರಣೆ ನಡೆಯುತ್ತದೆ. ಅಂಗಾಂಗ ದಾನದ ಮಹತ್ವವನ್ನು ಜನತೆಗೆ ತಿಳಿಸುವುದು ಮತ್ತು ಹೆಚ್ಚಿನ ಜನರನ್ನು ಅಂಗಾಂಗ ದಾನದತ್ತ ಪ್ರೇರೇಪಿಸುವುದು ಈ ದಿನದ ಉದ್ದೇಶ. ಭಾರತದಲ್ಲಿ ಅಂಗಾಂಗ ದಾನ ಕಡಿಮೆ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ, ಮಹತ್ವವನ್ನು ಪ್ರಚಾರಗೊಳಿಸುವುದು ಅವಶ್ಯಕ.

ಅಂಗಾಂಗ ದಾನ ಮಹತ್ವದ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನೆಫ್ರಾಲಜಿ (ಮೂತ್ರ ಪಿಂಡ) ವಿಭಾಗದ ಹೆಚ್​ಒಡಿ ಡಾ.ಮಯೂರ್ ವಿ.ಪ್ರಭು ಅವರು 'ಈಟಿವಿ ಭಾರತ'ದ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಂಗಾಂಗ ದಾನದ ಕುರಿತು ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಮಯೂರ್ ವಿ. ಪ್ರಭು ಮಾಹಿತಿ ನೀಡಿದರು. (ETV Bharat)

"ಅಂಗಾಂಗ ದಾನವನ್ನು ಮರಣೋತ್ತರ ಅಥವಾ ಜೀವಂತವಾಗಿರುವಾಗಲೂ ಮಾಡಬಹುದು. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಅಂಗಾಂಗ ದಾನ ಮಾಡಬಹುದು. ಆದರೆ ಮರಣೋತ್ತರ ದಾನಕ್ಕಾಗಿ ಅವರ ಕುಟುಂಬ ಸದಸ್ಯರ ಒಪ್ಪಿಗೆ ಮುಖ್ಯ" ಎಂದು ಅವರು ತಿಳಿಸಿದರು​.

"ಭಾರತದಲ್ಲಿ ಅಂಗಾಂಗ ದಾನದ ಬಗ್ಗೆ ಸಾಕಷ್ಟು ನಿಯಮಗಳು ಮತ್ತು ನಿಯಂತ್ರಣಗಳಿವೆ. 2011ರಲ್ಲಿಯೇ ಭಾರತ ಸರ್ಕಾರ ಅಂಗಾಂಗ ದಾನವನ್ನು ಸುಗಮಗೊಳಿಸಲು ನೋಟೋ (National Organ and Tissue Transplant Organization) ಅನ್ನು ಸ್ಥಾಪಿಸಿತು. ಇದು ಅಂಗಾಂಗ ದಾನದ ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಪಾರದರ್ಶಕವಾಗಿಡಲು ಸಹಾಯ ಮಾಡುತ್ತಿದೆ. ಅಂಗಾಂಗ ದಾನದಿಂದ ಒಂದು ಜೀವಕ್ಕೆ ಹೊಸ ಜೀವನ ನೀಡಲು ಸಾಧ್ಯ. ಉದಾಹರಣೆಗೆ, ಒಂದು ದಾನದಿಂದ 8 ರಿಂದ 9 ಜೀವಗಳನ್ನು ಉಳಿಸಲು ಸಾಧ್ಯವಿದೆ. ಹೃದಯ ದಾನದಿಂದ ಹೃದಯ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯ ಪ್ರಾಣವನ್ನೇ ಉಳಿಸಬಹುದು. ಕಿಡ್ನಿ ದಾನದಿಂದ ಡಯಾಲಿಸಿಸ್​ನಲ್ಲಿರುವ ವ್ಯಕ್ತಿಗೆ ಸ್ಥಿರತೆ ನೀಡಬಹುದು" ಎಂದು ಹೇಳಿದರು.

ಯಾರು ಅಂಗಾಂಗ ದಾನ ಮಾಡಬಹುದು?:ಜೀವಂತ ಇರುವವರು ಮತ್ತು ಬ್ರೈನ್ ಡೆತ್​ ಆದವರು ಅಂಗಾಂಗ ದಾನ ಮಾಡಬಹುದು. ಜೀವಂತ ಇರುವವರು ತಮ್ಮ ತೀರಾ ಹತ್ತಿರದ ಸಂಬಂಧಿಗಳಿಗೆ ಕಿಡ್ನಿ, ಲಿವರ್ ದಾನ ಮಾಡಬಹುದು. ಬ್ರೈನ್ ಡೆತ್ ಆದವರು ಎರಡು ಕಿಡ್ನಿ, ಲಿವರ್, ಲಂಗ್ಸ್, ಹೃದಯ ಮತ್ತು ಕಣ್ಣುಗಳನ್ನು ದಾನ ಮಾಡಬಹುದು.

ಜೀವಂತ ಇರುವವರು ಹೇಗೆ ದಾನ ಮಾಡಬಹುದು?:ಅಂಗಾಂಗ ವೈಫಲ್ಯಕ್ಕೊಳಗಾದ ವ್ಯಕ್ತಿಯ ತೀರಾ ಸಂಬಂಧಿಕರು ಮಾತ್ರ ಅಂಗಾಂಗ ದಾನ ಮಾಡಬಹುದು. ಇಂಡಿಯನ್ ಹ್ಯೂಮನ್ ಆರ್ಗನ್ ಟ್ರಾನ್ಸ್​ಪ್ಲಾಂಟ್ ಆ್ಯಕ್ಟ್ ಪ್ರಕಾರ ರೋಗಿಯ ತಂದೆ ತಾಯಿ, ಹೆಂಡತಿ, ಸಹೋದರ, ಸಹೋದರಿ, ಮಕ್ಕಳು ಮಾತ್ರ ಕಿಡ್ನಿ ಅಥವ‌ಾ ಲಿವರ್ ದಾನ ಮಾಡಲು ಸಾಧ್ಯ.

ಬ್ರೈನ್ ಡೆಡ್ ಆದವರ ದಾನ ಪ್ರಕ್ರಿಯೆ ಹೇಗೆ?: "ಬ್ರೈನ್ ಡೆಡ್ ಆದವರ ಅಂಗಾಂಗ ದಾನ ಮಾಡಲು ಹಲವು ನಿಯಮಗಳಿದೆ. ಆ ಆಸ್ಪತ್ರೆ ಬ್ರೈನ್ ಡೆಡ್ ಘೋಷಿಸಲು ಲೈಸೆನ್ಸ್ ಪಡೆದಿರಬೇಕು. ಅಂತಹ ಆಸ್ಪತ್ರೆಯಿಂದ ರೋಗಿಯ ಅಂಗಾಂಗ ದಾನ ಮಾಡಲು ಸಂಬಂಧಿಕರು ಒಪ್ಪಬೇಕು. ಇದನ್ನು ವೈಟಿಂಗ್ ಲಿಸ್ಟ್​ನಲ್ಲಿ ಕಾಯುತ್ತಿರುವ ರೋಗಿಗಳಿಗೆ ದಾನ ಮಾಡಬಹುದಾಗಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಜೀವಂತ ಇರುವವರ ಅಂಗಾಂಗ ದಾನ ಮತ್ತು ಬ್ರೈನ್ ಡೆಡ್ ಆದವರ ಅಂಗಾಂಗ ಜೋಡಣೆಗೆ ಲೈಸೆನ್ಸ್ ಇದ್ದು, ಇದಕ್ಕೆ ವ್ಯವಸ್ಥೆ ಇದೆ" ಎಂದು ಮಾಹಿತಿ ನೀಡಿದರು.

ಅಂಗಾಂಗ ದಾನವು ಮಾನವೀಯತೆಗೆ ಶ್ರೇಷ್ಠ ಉದಾಹರಣೆ. ಇದು ಸಾವಿನ ನಂತರವೂ ಮನುಷ್ಯ ಸೇವೆ ಮುಂದುವರಿಸಲು ಅನನ್ಯ ಅವಕಾಶ. 2010ರಿಂದ ಅಂಗಾಂಗ ದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂಗಾಂಗ ದಾನದ ಬಗ್ಗೆ ಅರಿವು ಕಡಿಮೆ ಇದ್ದು, ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಅಂಗಾಂಗ ದಾನ ಮಾಡುವ ನಿರ್ಧಾರದಿಂದ ಅನೇಕ ಜೀವಗಳಿಗೆ ಹೊಸ ಬೆಳಕು ನೀಡಿದಂತಾಗುವುದರಿಂದ ಈ ದಿನಾಚರಣೆ ಸಂದರ್ಭದಲ್ಲಿ, ಹೆಚ್ಚಿನವರು ಅಂಗಾಂಗ ದಾನದ ಮಹತ್ವ ಅರಿತು ದಾನ ಮಾಡಲು ಮುಂದಾಗಬೇಕಾಗಿದೆ" ಎಂದರು.

ಇದನ್ನೂ ಓದಿ:ರಾಷ್ಟ್ರೀಯ ಅಂಗಾಂಗ ದಾನ ದಿನ: ಸತ್ತ ನಂತರ ಮಣ್ಣಾಗುವುದಕ್ಕಿಂತ: ಅಂಗಾಂಗ ದಾನ ಮಾಡಿ, 8 ಜನರಿಗೆ ಜೀವ ಕೊಡಿ - National Organ Donation Day

ABOUT THE AUTHOR

...view details