ಬೆಂಗಳೂರು:ವಿಶ್ವದಾದ್ಯಂತ ಒಟ್ಟು ಕ್ಯಾನ್ಸರ್ ಸಾವಿನ ಪ್ರಮಾಣದಲ್ಲಿ ಶೇ.21 ರಷ್ಟು ತಂಬಾಕು ಸೇವನೆಯಿಂದ ಸಂಭವಿಸುತ್ತಿವೆ. ಇದರಲ್ಲಿ ಶ್ವಾಸಕೋಶ ಕ್ಯಾನ್ಸರ್ ಸಹ ಸೇರಿದೆ. ಧೂಮಪಾನ ಮಾಡದಿರುವವರಲ್ಲಿಯೂ ಈ ಶ್ವಾಸಕೋಶದ ಕ್ಯಾನ್ಸರ್ನ ಅಪಾಯಗಳು ಹೆಚ್ಚಿವೆ ಮತ್ತು ಇದಕ್ಕೆ ಸಾಕಷ್ಟು ಕಾರಣಗಳಿವೆ. ವಾಯುಮಾಲಿನ್ಯವು ಈ ವರ್ಗದವರಲ್ಲಿ ಶ್ವಾಸಕೋಶ ಕ್ಯಾನ್ಸರ್ ಉಂಟುಮಾಡುವಲ್ಲಿ ಪ್ರಮುಖ ಕಾರಣವಾಗಿದೆ. ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಅಗತ್ಯ ಉಸಿರಾಟದ ಅಂಗ ಎಂದರೆ ಅದು ಶ್ವಾಸಕೋಶ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವ ಪೀಳಿಗೆಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಿದ್ದು, ಹೆಚ್ಚು ಜನ ಶ್ವಾಸಕೋಶ ಸಂಬಂಧಿತ ತೊಂದರೆಗಳಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.
ನಮ್ಮ ಶ್ವಾಸಕೋಶಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಆಮ್ಲಜನಕ ನಮಗೆ ಉತ್ತಮ ರೀತಿಯಲ್ಲಿ ಸರಬರಾಜು ಆದಲ್ಲಿ ನಮ್ಮ ಇಡೀ ದೇಹ ಲವಲವಿಕೆಯಿಂದ ಇರುತ್ತದೆ. ಜತೆಗೆ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ನಾವು ಹೊರ ಹಾಕಬೇಕುತ್ತದೆ. ಈ ಕೆಲಸವನ್ನು ಶ್ವಾಸಕೋಶಗಳು ಮಾಡುತ್ತವೆ. ಹೃದಯದ ರೀತಿ ಶ್ವಾಸಕೋಶಗಳು ವಿಶ್ರಾಂತಿ ಪಡೆಯುವುದಿಲ್ಲ. ಡೀಸೆಲ್ ಮತ್ತು ಗ್ಯಾಸೊಲಿನ್ ಲೋಹಗಳು ಸಿಲಿಕಾದಂತಹ ಉಸಿರಾಟದ ಮೂಲಕ ದೇಹವನ್ನು ಸೇರಿಕೊಳ್ಳುವ ಧೂಳು ಮತ್ತು ಗಣಿಗಾರಿಕೆ, ಫೌಂಡರಿಗಳು, ಟ್ರಕ್ ಸಾಗಣೆ, ಕಾರ್ಬನ್ ಬ್ಲ್ಯಾಕ್ ಮತ್ತು ಡಾಂಬರ್ ಉತ್ಪಾದನೆ ಮಾಡುವಂತಹ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಕೆಲಸ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಸಂಶೋಧಕರು.