ಖಾತೆ ತೆರೆಯಲು ಮಹಿಳೆಯರ ಸಾಲು (ETV Bharat) ಬೆಂಗಳೂರು: ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿನ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಮಹಾಲಕ್ಷ್ಮೀ ಯೋಜನೆ ಕುರಿತು ವದಂತಿ ಹಬ್ಬಿದ್ದರಿಂದ ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಗ್ರಾಹಕರಿಗೆ ಆಹ್ವಾನ ನೀಡಿ ಉತ್ತೇಜಿಸುತ್ತಿದ್ದ ಅಂಚೆ ಇಲಾಖೆಯಲ್ಲಿ ಇಂದು 'ಟುಡೇಸ್ ಟೋಕನ್ ಓವರ್, ಸಿಟ್ ಅಟ್ ಹೋಂ ಅಂಡ್ ಓಪೆನ್ ಐಪಿಪಿಬಿ ಅಕೌಂಟ್' ಎನ್ನುವ ಫಲಕಗಳನ್ನು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಚೆ ಇಲಾಖೆಯಿಂದಲೇ ಹಣ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಮನವರಿಕೆ ಮಾಡಿಕೊಡುತ್ತಿದ್ದರೂ ಕೇಳಲು ಸಿದ್ಧರಿಲ್ಲದ ಮಹಿಳೆಯರು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ(ಜಿಪಿಒ) ಮುಂದೆ ಆಧಾರ್ ಕಾರ್ಡ್ ಹಿಡಿದು ನಿಂತಿದ್ದಾರೆ. ದಿನದ ಟೋಕನ್ ಖಾಲಿಯಾದರೂ ಜನರು ಮಾತ್ರ ಸರದಿ ಸಾಲು ಬಿಟ್ಟು ಕದಲುತ್ತಿಲ್ಲ.
ಸಿಬ್ಬಂದಿ ಓವರ್ ಡ್ಯೂಟಿ ಮಾಡುವ ಸನ್ನಿವೇಶ ಸೃಷ್ಟಿ:ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಸಾವಿರಾರು ಮಹಿಳೆಯರು ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಅಂಚೆ ಕಚೇರಿಯೆದುರು ಜಮಾಯಿಸುತ್ತಿದ್ದಾರೆ. ಇದರಿಂದಾಗಿ ಖಾತೆ ತೆರುಯುವ ಪ್ರಕ್ರಿಯೆ ಮಾಡಲು ಸಿಬ್ಬಂದಿ ಹೈರಾಣಾಗುವಂತಾಗಿದೆ. ಏಕಾಏಕಿ ಐದರಿಂದ ಹತ್ತು ಸಾವಿರ ಜನರು ಪ್ರತಿ ದಿನ ಖಾತೆ ತೆರೆಯಲು ಬರುತ್ತಿರುವುದು ಸಿಬ್ಬಂದಿ ಓವರ್ ಟೈಂ ಡ್ಯೂಟಿ ಮಾಡಬೇಕಾದ ಸನ್ನಿವೇಶ ನಿರ್ಮಿಸಿದೆ. ಬೆಳಗ್ಗೆ 6 ಗಂಟೆಯಿಂದಲೇ ಜಿಪಿಒ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡುವಂತಾಗಿದೆ. ಸಂಜೆ 4ರವರೆಗೂ ನಿರಂತರವಾಗಿ ಕೆಲಸ ಮಾಡಿ ಖಾತೆ ತೆರೆದುಕೊಡುವ ಕೆಲಸ ಮಾಡಲಾಗುತ್ತಿದೆ.
ವದಂತಿ ನಂಬಿ ಪೋಸ್ಟ್ ಆಫೀಸ್ನತ್ತ ಮಹಿಳೆಯರು:ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಒಕ್ಕೂಟ ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಬಡ ಕುಟುಂಬಗಳ ಹಿರಿಯ ಮಹಿಳೆಯ ಖಾತೆಗೆ ತಲಾ 1 ಲಕ್ಷ ರೂ ಜಮೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಆದರೆ ಈ ಯೋಜನೆಯ ಫಲಾನುಭವಿಯಾಗಲು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರಬೇಕು, ಆದಷ್ಟು ಬೇಗ ಖಾತೆ ಮಾಡಿಸಿಕೊಳ್ಳಿ ಎಂದು ವದಂತಿಗಳು ಹಬ್ಬಿದ್ದರಿಂದ ಮಹಿಳೆಯರು ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಮುಗಿಬಿದ್ದಿದ್ದಾರೆ. ಎಲ್ಲಾ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯುವ ಅವಕಾಶ ಇದ್ದರೂ ಅಲ್ಲಿ ಸರ್ವರ್ ಡೌನ್, ವಿಳಂಬದ ಭೀತಿಯಿಂದ ಮಹಿಳೆಯರು ಖಾತೆ ತೆರೆಯಲು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ(ಜಿಪಿಒ)ಗೆ ಆಗಮಿಸುತ್ತಿದ್ದಾರೆ. ಮೇ 31ರ ಒಳಗೆ ಖಾತೆ ಮಾಡಿಸಬೇಕು, ಚುನಾವಣಾ ಫಲಿತಾಂಶ ಜೂನ್ 4ಕ್ಕೆ ಬರುತ್ತಿದ್ದಂತೆಯೇ ಐಎನ್ಡಿಐಎ ಸರ್ಕಾರ ರಚನೆಯಾಗಿ ತಕ್ಷಣವೇ ಹಣ ಖಾತೆಗೆ ಜಮೆಯಾಗಲಿದೆ ಎನ್ನುವ ವದಂತಿಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಮನೆಯಲ್ಲೇ ಕುಳಿತು ಖಾತೆ ತೆರೆಯಿರಿ ಎಂದು ಫಲಕಗಳು ರಾರಾಜನೆ:ಟುಡೇಸ್ ಟೋಕನ್ ಓವರ್, ಮನೆಯಲ್ಲಿ ಕುಳಿತೇ ಖಾತೆ ತೆರೆಯಬಹುದು, ಪೋಸ್ಟ್ ಮ್ಯಾನ್ ಮನೆ ಬಾಗಿಲಿಗೆ ಬರುತ್ತಾರೆ... ಈ ಸೌಲಭ್ಯ ಉಪಯೋಗಿಸಿಕೊಳ್ಳಿ, ಆಧಾರ್ ಸೀಡಿಂಗ್ ಆಗಿರುವ ಖಾತೆ ಈಗಾಗಲೇ ಇದ್ದಲ್ಲಿ ಮತ್ತೊಂದು ಖಾತೆ ತೆರೆಯುವ ಅಗತ್ಯವಿಲ್ಲ ಎನ್ನುವ ಫಲಕಗಳ ಜೊತೆ ಅಂಚೆ ಇಲಾಖೆಯೇ ಹಣ ಹಾಕುವ ಯಾವುದೇ ಯೋಜನೆ ಇಲ್ಲ. ವದಂತಿ ನಂಬಬೇಡಿ ಎನ್ನುವ ಬ್ಯಾನರ್ಗಳನ್ನೂ ಅಳವಡಿಸಲಾಗಿದೆ. ಮೈಕ್ ಮೂಲಕವೂ ಪ್ರಕಟಿಸಲಾಗುತ್ತಿದೆ, ಹೀಗಿದ್ದರೂ ಮಹಿಳೆಯರು ಇದ್ಯಾವುದನ್ನೂ ಪರಿಗಣಿಸಿದೆ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ಇಲಾಖೆ ಹೆಚ್ಚುವರಿ ಕೌಂಟರ್ಗಳನ್ನು ತೆರೆಯಲಾಗಿದೆ. ಕಚೇರಿಯ ಹೊರಭಾಗದ ಆವರಣದಲ್ಲಿ ಕುರ್ಚಿ ಟೇಬಲ್ಗಳನ್ನು ಇರಿಸಿಕೊಂಡು 15 ಕೌಂಟರ್ ತೆರೆದು ಸರದಿ ಸಾಲಿನಲ್ಲಿ ಬರುವ ಮಹಿಳೆಯರಿಗೆ ಖಾತೆ ಮಾಡಿಕೊಡಲಾಗುತ್ತಿದೆ.
ಕ್ಯೂಆರ್ ಕೋಡ್ ಕಾರ್ಡ್ನಿಂದ ಹಣ ವಿತ್ ಡ್ರಾ ಪ್ರಯತ್ನ:ಖಾತೆ ತೆರೆದುಕೊಡುವಾಗ ಪಾಸ್ ಬುಕ್ ಬದಲು ಕ್ಯೂಆರ್ ಕೋಡ್ ಇರುವ ಕಾರ್ಡ್ವೊಂದನ್ನು ಖಾತೆಯ ಸಂಖ್ಯೆ ನಮೂದಿಸಿ ಕೊಡಲಾಗುತ್ತಿದೆ. ಆದರೆ ಈ ಕಾರ್ಡ್ ಅನ್ನೇ ಎಟಿಎಂ ಕಾರ್ಡ್ ಎಂದು ಭಾವಿಸಿರುವ ಮಹಿಳೆಯರು ಜಿಪಿಒ ಹೊರಭಾಗದಲ್ಲಿರುವ ಅಂಚೆ ಕಚೇರಿಯ ಎಟಿಎಂಗೆ ಹೋಗಿ ಬಳಸುವ ಪ್ರಯತ್ನ ಮಾಡುತ್ತಿದ್ದಾರೆ. ಖಾತೆ ತೆರೆಯುತ್ತಿದ್ದಂತೆ ತಮ್ಮ ಖಾತೆಗೆ 8,500 ರೂ. ಬರಲಿದ್ದು, ಪ್ರತಿ ತಿಂಗಳೂ ಇಷ್ಟು ಹಣ ಬರಲಿದೆ ಎಂದು ಭಾವಿಸಿ ಹಣ ವಿತ್ ಡ್ರಾ ಮಾಡಲು ಎಟಿಎಂಗೆ ಹೋಗುತ್ತಿದ್ದಾರೆ. ಕಚೇರಿ ಸಿಬ್ಬಂದಿ ತಿಳಿ ಹೇಳಿದರೂ ಕೇಳದೆ ಎಟಿಎಂಗೆ ಕಾರ್ಡ್ ಹಾಕಿ ಹಣ ವಿತ್ ಡ್ರಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಎಟಿಎಂಗೆ ಪೊಲೀಸ್ ಭದ್ರತೆ ಕಲ್ಪಿಸಿ ಎಟಿಎಂ ಕಾರ್ಡ್ ಇದ್ದರಷ್ಟೇ ಎಟಿಎಂ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಅಂಚೆ ಇಲಾಖೆ ಅಧಿಕಾರಿಗಳು, ಖಾತೆ ತೆರೆಯಲು ಜಿಪಿಒಗೆ ಬರುವ ಅಗತ್ಯವಿಲ್ಲ, ನೀವಿರುವ ಕಡೆಯಲ್ಲಿಯೇ ಸಮೀಪದ ಅಂಚೆ ಕಚೇರಿಯಲ್ಲಿ ತೆರೆಯಿರಿ ಎಂದರೂ ಜನರು ಕೇಳದೆ ಜಿಪಿಒಗೆ ಬರುತ್ತಿದ್ದಾರೆ. ಅನಿವಾರ್ಯವಾಗಿ ಎಲ್ಲರಿಗೂ ನಾವು ಇಲ್ಲಿಯೇ ಖಾತೆ ತೆರೆದುಕೊಡುವ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ದಿನಕ್ಕೆ 50 ಖಾತೆಯೂ ತೆರೆಯುತ್ತಿರಲಿಲ್ಲ. ಆದರೆ ಇಂದು ಸಾವಿರಾರು ಜನ ಒಟ್ಟಿಗೆ ಬರುತ್ತಿದ್ದಾರೆ. ಹಾಗಾಗಿ 1200 ಟೋಕನ್ಗಳನ್ನು ಪ್ರತಿ ದಿನ ವಿತರಣೆ ಮಾಡುತ್ತಿದ್ದೇವೆ. ಟೋಕನ್ ಖಾಲಿಯಾದರೂ ಜನರು ಕ್ಯೂ ನಿಲ್ಲುವುದು ತಪ್ಪಿಲ್ಲ, ಕಡೆಯ ಸಮಯಾವಕಾಶ ನೀಡಿ ಹೆಚ್ಚುವರಿಯಾಗಿ 200-300 ಜನರಿಗೆ ಖಾತೆ ತೆರೆದುಕೊಡುವ ಕೆಲಸ ಮಾಡುತ್ತಿದ್ದೇವೆ, ಅದಕ್ಕಾಗಿ 15 ಕೌಂಟರ್ ತೆರೆದಿದ್ದು ಮೂಲಸೌಕರ್ಯಗಳನ್ನು ಒದಗಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ವರ್ಷದ ಹರುಷ: ಹತ್ತು ಹಲವು ಸವಾಲಿನ ಮಧ್ಯೆ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ - ONE YEAR FOR CONGRESS GOVT