ಕರ್ನಾಟಕ

karnataka

ETV Bharat / state

ಲೋಕಸಭೆಗೆ ರಾಜ್ಯದಿಂದ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಅತ್ಯಲ್ಪ; ಠೇವಣಿ ಕಳೆದುಕೊಂಡವರೇ ಹೆಚ್ಚು - Women In Lok Sabha Election - WOMEN IN LOK SABHA ELECTION

ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಅತ್ಯಲ್ಪ. ಅಷ್ಟೇ ಅಲ್ಲ, ಮಹಿಳಾ ಸ್ಪರ್ಧಿಗಳಲ್ಲಿ ಠೇವಣಿ ಕಳೆದುಕೊಂಡವರೇ ಹೆಚ್ಚಿದ್ದಾರೆ.

WOMEN CANDIDATES  BENGALURU  WOMEN VOTERS
ಲೋಕಸಮರ: ರಾಜ್ಯದಲ್ಲಿ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಅತ್ಯಲ್ಪ

By ETV Bharat Karnataka Team

Published : Apr 5, 2024, 6:38 PM IST

ಬೆಂಗಳೂರು: ರಾಜ್ಯದಲ್ಲಿ ಲೋಕಸಮರದ ಕಾವು ಹೆಚ್ಚುತ್ತಿದೆ. ಚುನಾವಣಾ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂಬುದು ದಶಕಗಳ ಕೂಗು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಲೋಕಸಮರದಲ್ಲಿ ಮಹಿಳೆಯರ ಪಾರುಪತ್ಯ ಹೇಗಿದೆ? ಎಂಬ ವರದಿ ಇಲ್ಲಿದೆ.

ಕೇಂದ್ರದಲ್ಲಿ ಮೋದಿ ಸರ್ಕಾರ ಈಗಾಗಲೇ ಚುನಾವಣೆಯಲ್ಲಿ 30% ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಆ ಮೂಲಕ ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ‌ ಪ್ರಾತಿನಿಧ್ಯ ಸಿಗಲಿದೆ.‌ ಇತ್ತ ರಾಜ್ಯದಲ್ಲಿ ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ನಿರಾಶಾದಾಯಕವಾಗಿದೆ. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದಲ್ಲಿ ಮಹಿಳೆಯರು ಕಣಕ್ಕಿಳಿದಿರುವ ಪ್ರಮಾಣ ಅತ್ಯಲ್ಪವಾಗಿದೆ. ರಾಷ್ಟ್ರೀಯ ಪಕ್ಷಗಳು ಬೆರಳೆಣಿಕೆಯಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಇತ್ತ ಪಕ್ಷೇತರರಾಗಿ ಅಖಾಡಕ್ಕಿಳಿಯುವ ಮಹಿಳೆಯರ ಪ್ರಮಾಣವೂ ಅಷ್ಟಕಷ್ಟೇ. ರಾಜ್ಯದಲ್ಲಿ 10ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಆದರೆ, ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಮಾತ್ರ ಅತ್ಯಲ್ಪ.

2019ರ ಚುನಾವಣೆಯಲ್ಲಿ ಮಹಿಳಾಶಕ್ತಿ: 2019 ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಒಟ್ಟು 27 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಣಕ್ಕಿಳಿದ ಒಟ್ಟು ಅಭ್ಯರ್ಥಿಗಳ ಪೈಕಿ 5.64% ಮಾತ್ರ ಮಹಿಳೆಯರಾಗಿದ್ದರು. ಈ ಪೈಕಿ ಮೂವರು ಎಸ್​ಸಿಗೆ ಸೇರಿದವರಾಗಿದ್ದರು.

ಕಣಕ್ಕಿಳಿದಿದ್ದ 27 ಮಹಿಳೆಯರ ಪೈಕಿ ಶೋಭಾ ಕರಂದ್ಲಾಜೆ ಹಾಗೂ ಸುಮಲತಾ ಮಾತ್ರ ಗೆದ್ದು ಬೀಗಿದ್ದರು. ಉಳಿದಂತೆ 24 ಮಹಿಳಾ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದರು. ಬೆಳಗಾವಿಯಲ್ಲಿ 4 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲರೂ ಠೇವಣಿ ಕಳಕೊಂಡಿದ್ದರು. ಬಾಗಲಕೋಟೆಯಲ್ಲಿ ಒಬ್ಬರು ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಮಾತ್ರ ಸ್ಪರ್ಧಿಸಿ, ಸೋಲು ಕಂಡಿದ್ದರು.

ಬಿಜಾಪುರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಬೀದರ್, ಧಾರವಾಡದಲ್ಲಿ ತಲಾ 1 ಮಹಿಳಾ ಅಭ್ಯರ್ಥಿ ಕಣದಲ್ಲಿದ್ದರು. ಉತ್ತರ ಕನ್ನಡ 2, ಉಡುಪಿ-ಚಿಕ್ಕಮಗಳೂರು 1, ತುಮಕೂರು 2, ಮಂಡ್ಯ 4, ಮೈಸೂರು 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರದಲ್ಲಿ ತಲಾ 1 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇನ್ನು ಚಿಕ್ಕಬಳ್ಳಾಪುರದಲ್ಲಿ 3 ಮಹಿಳೆಯರು ಸ್ಪರ್ಧಿಸಿದ್ದರು.

2019ರಲ್ಲಿ ರಾಜ್ಯದಲ್ಲಿ ಒಟ್ಟು ಮಹಿಳಾ ಮತದಾರರ ಸಂಖ್ಯೆ 2.52 ಕೋಟಿ. ರಾಯಚೂರು, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ 12 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿತ್ತು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಣಕ್ಕಿಳಿದಿದ್ದ 24 ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 23,81,968 ಮತ ಚಲಾವಣೆಯಾಗಿತ್ತು. ಅಂದರೆ ರಾಜ್ಯದಲ್ಲಿ ಒಟ್ಟು 3.48 ಕೋಟಿ ಚಲಾವಣೆಯಾದ ಮತಗಳ ಪೈಕಿ ಮಹಿಳಾ ಅಭ್ಯರ್ಥಿಗಳಿಗೆ ಬಿದ್ದ ಮತಗಳು 6.84% ಮಾತ್ರ.

2014ರ ಚುನಾವಣೆಯಲ್ಲಿ ಮಹಿಳಾಶಕ್ತಿ: ಈ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು 20 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸ್ಪರ್ಧಿಸಿದವರಲ್ಲಿ ಗೆದ್ದವರು ಒಬ್ಬರು ಮಾತ್ರ.

20 ಅಭ್ಯರ್ಥಿಗಳಲ್ಲಿ ಇಬ್ಬರು ಎಸ್ ಸಿ ಸಮುದಾಯಕ್ಕೆ ಸೇರಿದ ಮಹಿಳೆಯರಾಗಿದ್ದಾರೆ. ಒಟ್ಟು 16 ಮಹಿಳಾ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡರು. ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 19,30,249 ಮತಗಳು ಬಿದ್ದಿದ್ದವು. ಅಂದರೆ ರಾಜ್ಯದಲ್ಲಿ ಒಟ್ಟು 3.76 ಕೋಟಿ ಚಲಾವಣೆಯಾದ ಮತಗಳ ಪೈಕಿ ಮಹಿಳಾ ಅಭ್ಯರ್ಥಿಗಳಿಗೆ ಚಲಾವಣೆಯಾದ ಮತಗಳ ಸಂಖ್ಯೆ ಕೇವಲ 6.27% ಮಾತ್ರ.

ಇದನ್ನೂ ಓದಿ:ಸಂಸತ್ತಿನಲ್ಲಿ ಕರ್ನಾಟಕದ ಮಹಿಳಾ ಧ್ವನಿ: 1950 ರಿಂದ ಇಲ್ಲಿವರೆಗೂ ಲೋಕಸಭೆಯಲ್ಲಿ ನಾರಿಯರ ಪ್ರಾತಿನಿಧ್ಯ​ ಹೀಗಿತ್ತು - Karnataka women MPS

ABOUT THE AUTHOR

...view details