ಹಾವೇರಿ/ಬೆಂಗಳೂರು:ರಾಜ್ಯದ ವಿವಿಧೆಡೆ ಮೈಕ್ರೋ ಫೈನಾನ್ಸ್‌ಗಳ ಸಾಲ ವಸೂಲಾತಿ ಕಾಟಕ್ಕೆ ಜನರು ಬೇಸತ್ತಿದ್ದು, ಕೆಲವು ಕಡೆ ಗ್ರಾಮವನ್ನೇ ತೊರೆದು ಬೇರೆಡೆ ದುಡಿಯಲು ಹೋಗಿದ್ದಾರೆ. ರಾಣೆಬೆನ್ನೂರಿನ ಮಹಿಳೆಯರು ಮೈಕ್ರೋ ಫೈನಾನ್ಸ್ ವಿರುದ್ಧ ವಿಭಿನ್ನ ರೀತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ.
ಹೌದು.. ಮೈಕ್ರೋ ಫೈನಾನ್ಸ್ನಿಂದ ತಮ್ಮ ಮಾಂಗಲ್ಯಕ್ಕೆ ಕುತ್ತು ಬಂದಿದ್ದು, ಮಾಂಗಲ್ಯ ಸರವನ್ನು ಉಳಿಸಿ ಎಂದು ಮಹಿಳೆಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಅಂಚೆ ಮೂಲಕ ಮಾಂಗಲ್ಯ ಮತ್ತು ಪತ್ರವನ್ನು ಸಿಎಂ ಸಿದ್ದರಾಮಯ್ಯರಿಗೆ ಪೋಸ್ಟ್ ಮಾಡಿ, ನಮ್ಮ ಮಾಂಗಲ್ಯವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬಳಿಕ ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿಗೂ ಸಹ ಮಾಂಗಲ್ಯ ಪತ್ರವನ್ನು ನೀಡಿದ್ದಾರೆ. ವಿನಾಕಾರಣ ನಿತ್ಯ ಮನೆಗೆ ಬಂದು ಕಿರಕುಳ ನೀಡುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಹಿಳೆಯರು ಒತ್ತಾಯಿಸಿ, ಅವರ ಕಾಟದಿಂದ ಮುಕ್ತಿ ಕೊಡುವಂತೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿರುವ ಜಿಲ್ಲಾಡಳಿತ, ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.
ಮೈಕ್ರೋ ಫೈನಾನ್ಸ್‌ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು-ಹೆಚ್ಡಿಕೆ:
ರಾಜ್ಯದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ರಾಜ್ಯದಲ್ಲಿ ಬಡ, ಮಧ್ಯಮ ವರ್ಗದ ಜನರ ರಕ್ತ ಹಿಂಡುತ್ತಿರುವ ಮೈಕ್ರೋ ಫೈನಾನ್ಸ್‌ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು" ಎಂದು ರಾಜ್ಯ ಸರ್ಕಾರವನ್ನು ಹೆಚ್ಡಿಕೆ ಆಗ್ರಹಿಸಿದ್ದಾರೆ.
"ಇದನ್ನು ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಸರ್ಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ನಾಗರಿಕ ಸರ್ಕಾರ, ಗೃಹ ಸಚಿವರು ಎನ್ನುವವರು ಇದ್ದಾರೆಯೇ?. 2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಕಿಡಿಗೇಡಿ ಫೈನಾನ್ಸ್ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು 'ಋಣಮುಕ್ತ ಕಾಯ್ದೆ' ಜಾರಿಗೆ ತಂದೆ. ನನ್ನ ಸರ್ಕಾರ ಹೋಯಿತು, ಆ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿದರು" ಎಂದು ಅವರು ಬೇಸರ ವ್ಯಕ್ತಪಡಿಸಿದರು.