ಮಂಗಳೂರು (ದಕ್ಷಿಣ ಕನ್ನಡ) :ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದವರು. ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಅವರು ಜನ್ಮ ನೀಡಿದ್ದಾರೆ. ಈ ನಾಲ್ಕು ಮಕ್ಕಳೂ ಈಗ ಆರೋಗ್ಯವಾಗಿದ್ದಾರೆ. ಈ ಮಕ್ಕಳು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿವೆ. ಆದರೆ ಇದು 30 ವಾರಗಳ ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಮಕ್ಕಳಿಗೆ ಎನ್ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.