ಬೆಂಗಳೂರು:ಪರಿಚಿತ ಮಹಿಳೆ ಕರೆದಳೆಂದು ಮನೆಗೆ ಹೋದ ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 57 ವರ್ಷದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತೋಷ್, ಅಜಯ್ ಹಾಗೂ ಜಯರಾಜ್ ಎಂಬಾತನನ್ನು ಬಂಧಿಸಿದ್ದು, ನಯನಾ ಎಂಬಾಕೆ ಸೇರಿ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ದೂರುದಾರ ವ್ಯಕ್ತಿಗೆ 5 - 6 ತಿಂಗಳುಗಳ ಹಿಂದಷ್ಟೇ ಪರಿಚಯವಾಗಿದ್ದ ನಯನಾ ಆಗಾಗ ತನ್ನ ಮಗುವಿಗೆ ಹುಷಾರಿಲ್ಲವೆಂದು 4 - 5 ಸಾವಿರ ರೂ. ಹಣ ಪಡೆದುಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರ ವ್ಯಕ್ತಿ ಹೋಗಿರಲಿಲ್ಲ. ಡಿಸೆಂಬರ್ 9ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, "ನಮ್ಮ ಮನೆ ಸಮೀಪದಲ್ಲಿಯೇ ಇದೆ, ಟೀ ಕುಡಿದು ಹೋಗುವಿರಂತೆ ಬನ್ನಿ" ಎಂದು ಆಹ್ವಾನಿಸಿದ್ದಳು.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ (ETV Bharat) ಅದರಂತೆ ದೂರುದಾರ ಆಕೆಯ ಮನೆಗೆ ಹೋಗಿದ್ದರು. ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಬಂದ ಉಳಿದ ಮೂವರು ಆರೋಪಿಗಳು, "ನಾವು ಕ್ರೈಂ ಪೊಲೀಸ್ ಸಿಬ್ಬಂದಿ, ನೀವು ವ್ಯಭಿಚಾರದಲ್ಲಿ ತೊಡಗಿದ್ದೀರಾ" ಎನ್ನುತ್ತಾ ಬೆದರಿಸಿ ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ "ಎರಡು ಲಕ್ಷ ಕೊಡದಿದ್ದರೆ, ನಿಮ್ಮಿಬ್ಬರ ಅಕ್ರಮ ಸಂಬಂಧದ ಕುರಿತು ನಿನ್ನ ಪತ್ನಿಗೆ ಹೇಳುತ್ತೇವೆ" ಎಂದು ಬೆದರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ದೂರುದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ ಬಿಚ್ಚಿಸಿಕೊಂಡು 55 ಸಾವಿರ ನಗದು ಪಡೆದುಕೊಂಡು ಸ್ಥಳದಿಂದ ತೆರಳಿದ್ದರು. ಆರೋಪಿಗಳೊಂದಿಗೆ ತಾನೂ ತೆರಳಿದ್ದ ನಯನಾಳ ಬಗ್ಗೆ ಅನುಮಾನಗೊಂಡ ಸಂತ್ರಸ್ತ, ಆಕೆಗೆ ಕರೆ ಮಾಡಿ "ಪೊಲೀಸರಿಗೆ ದೂರು ಕೊಡೋಣ ಬಾ" ಎಂದು ಕರೆದಿದ್ದರು. ಆದರೆ "ದೂರು ಕೊಟ್ಟರೆ ಮಗುವಿನೊಂದಿಗೆ ನಿಮ್ಮ ಮನೆಗೆ ಬಂದು, ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯ ಎಂದು ನಿನ್ನ ಪತ್ನಿಗೆ ಹೇಳುತ್ತೇನೆ" ಎಂದು ನಯನಾ ಬೆದರಿಸಿದ್ದಳು ಎಂದು ದೂರುದಾರ ಉಲ್ಲೇಖಿಸಿದ್ದಾರೆ.
"ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಹನಿಟ್ರ್ಯಾಪ್ ಪ್ರಕರಣ ನಡೆದಿದೆ. ರಂಗನಾಥ್ ಎನ್ನುವ ಕಾಂಟ್ರ್ಯಾಕ್ಟರ್ಗೆ ಒಬ್ಬ ಮಹಿಳೆ ಮನೆಗೆ ಬರುವಂತೆ ಹೇಳಿ, ಅವರ ಗ್ಯಾಂಗ್ ಸೇರಿ ಅವರಿಂದ 27000 ಹಾಗೂ 8000 ರೂ. ಹಣವನ್ನು ಬೆದರಿಸಿ, ಜಿಪೇ ಮಾಡಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡು ಗ್ಯಾಂಗ್ ಹೆದರಿಸಿ ಹಣವನ್ನು ಹಾಕಿಸಿಕೊಂಡಿದೆ. ಈ ಹಿಂದೆ ಅವರ ಮೇಲೆ ಯಾವುದೇ ಈ ರೀತಿಯ ಪ್ರಕರಣಗಳು ದಾಖಲಾಗಿಲ್ಲ. ಈ ಗ್ಯಾಂಗ್ ಸದಸ್ಯರ ನಡುವಿನ ಸಂಬಂಧಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಆರೋಪಿಗಳೆಲ್ಲರೂ ಸೇರಿ ವಂಚಿಸಿರುವುದನ್ನು ಅರಿತ ಸಂತ್ರಸ್ತ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ" ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ:ದಾವಣಗೆರೆ: 32 ಜೀವಂತ ನಾಡ ಬಾಂಬ್ ಪತ್ತೆ, ಅರಣ್ಯ ಇಲಾಖೆಯಿಂದ ಆರೋಪಿಗಳ ಬಂಧನ