ಪ್ರತಾಪ್ ಸಿಂಹ ವಿಥೌಟ್ ಮೋದಿ ಜೀರೋ, ಮೋದಿಜಿ ಹೆಸರಿನಿಂದಲೇ ಗೆದ್ದಿದ್ದೇನೆ: ಸಂಸದ ಪ್ರತಾಪ್ ಸಿಂಹ ಮೈಸೂರು:ನರೇಂದ್ರಮೋದಿ ಹೆಸರಿನಲ್ಲಿ ನಾನು ಎರಡು ಬಾರಿ ಗೆದ್ದಿರುವೇ, ಮೋದಿ ಅವರು ನನ್ನ ಹಾಗೂ ಪಕ್ಷದ ಪಾಲಿಗೆ ದೇವರು ಇದ್ದಂಗೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಇಂದು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೈಸೂರು ಮನಮದುರೈ ನೂತನ ರೈಲಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ನಾಮ ಬಲದಿಂದ ನಾನು ಎರಡು ಬಾರಿ ಗೆದ್ದಿದ್ದೇನೆ. ಮೂರನೇ ಬಾರಿಯೂ ಕೂಡ ಮೋದಿ ಹೆಸರಿನಲ್ಲೇ ಗೆಲ್ಲುತ್ತೇನೆ. ಮೈಸೂರ ಅಧಿದೇವತೆ ಚಾಮುಂಡೇಶ್ವರಿ ತಾಯಿ, ಕರುನಾಡಿನ ಕಾವೇರಿ ತಾಯಿ ಹಾಗೂ ಮೋದಿಜಿ ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದರು.
ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳೇ ಇಲ್ಲ: ರಾಜ್ಯದಲ್ಲಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಲೋಕಸಭೆ ಅಭ್ಯರ್ಥಿಗಳೇ ಇಲ್ಲ. ಆದರೂ ಸೋಲುವ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ಗಾಗಿ ಹೊಡೆದಾಟ ನಡೆಯುತ್ತಿರುವಾಗ, ಗೆಲ್ಲುವ ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದೆ ಇರುತ್ತಾರೆ ಯಾರು ಅಭ್ಯರ್ಥಿಗಳು ಎಂಬುದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿ ಇರಬೇಕು. ಮೈಸೂರಿನಲ್ಲಿ ಬಿಜೆಪಿ ಗೆಲುವಿಗೆ ಮೋದಿಜಿ ಅವರ ಯೋಜನೆ ಮುಖಾಂತರ ನಾನು ಕೆಲಸ ಮಾಡಿದ್ದೇನೆ. ಕಳೆದ ಹತ್ತು ವರ್ಷದಿಂದ ಮೈಸೂರು - ಕೊಡಗು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ್ದೇನೆ ಎಂದು ಹೇಳಿದರು.
ಚುನಾವಣೆ ಎಂದರೆ ಹಲವು ಆಕಾಂಕ್ಷಿಗಳು ಇರುತ್ತಾರೆ. ಕಾರ್ಯಕರ್ತರಿಗೆ ಮತ್ತು ಪಕ್ಷದ ಪ್ರತಿಯೊಬ್ಬರಿಗೂ ಟಿಕೆಟ್ ಕೇಳುವ ಹಕ್ಕು ಇರುತ್ತದೆ. ಅಂತಿಮವಾಗಿ ನಮ್ಮ ರಾಜ್ಯ ನಾಯಕರು, ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರು, ರಾಜ್ಯಾಧ್ಯಕ್ಷರು ಹಾಗೂ ಸಂಘದ ಅಭಿಪ್ರಾಯ ಜೊತೆಗೆ ನರೇಂದ್ರ ಮೋದಿ, ಕೇಂದ್ರ ಚುನಾವಣಾ ಸಮಿತಿ ನಮ್ಮ ಕೆಲಸ ನೋಡಿ ಟಿಕೆಟ್ ನೀಡುತ್ತಾರೆ. ನಾನು ನರೇಂದ್ರ ಮೋದಿಯವರ ಹೆಸರಿನಲ್ಲಿ ಅವರು ಕೊಟ್ಟಿರುವ ಯೋಜನೆಗಳನ್ನು ಜನರಿಗೆ ನಿಯತ್ತಾಗಿ ತಲುಪಿಸಿದ್ದೇನೆ ಎಂದರು.
ಮೋದಿಜಿ ಹೊರತಾಗಿ ನಾನು ಏನೇನೂ ಅಲ್ಲ: ಪ್ರತಾಪ್ ಸಿಂಹ ವಿಥೌಟ್ ಮೋದಿ ಜೀರೋ, ಮೋದಿಜಿ ಹೆಸರಿನಿಂದಲೇ ಗೆದ್ದಿರುವವನು, ಅವರು ಕೊಟ್ಟ ಯೋಜನೆಗಳನ್ನೇ ನನ್ನ ಕ್ಷೇತ್ರಕ್ಕೆ ತಂದಿರುವುದು. ಮೋದಿಜಿ ಹೊರತಾಗಿ ನಾನು ಏನೇನೂ ಅಲ್ಲ. ಪಕ್ಷ ಮತ್ತು ಕಾರ್ಯಕರ್ತರು ನನ್ನನ್ನು ಮೋದಿಜಿ ಅವರಿಗೋಸ್ಕರ ಇಲ್ಲಿವರೆಗೂ ಬೆಳೆಸಿದ್ದಾರೆ. ಪಕ್ಷದ ವಿಶ್ವಾಸ ನನ್ನ ಮೇಲೆ ಇದೆ ಎಂದು ನನಗೆ ಖಚಿತವಾಗಿ ಗೊತ್ತಿದೆ. ಆದ್ದರಿಂದ ನಮ್ಮ ಕೇಂದ್ರ ಮತ್ತು ರಾಜ್ಯದ ನಾಯಕರು ಒಳ್ಳೆಯ ಸುದ್ದಿಯನ್ನು ಕೊಟ್ಟು ನನಗೆ ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತಾರೆ ಎಂದು ನನಗೆ ವಿಶ್ವಾಸ ಇದೆ ಎಂದು ತಿಳಿಸಿದರು.
ಇದನ್ನೂ ಓದಿ:ಜೆಡಿಎಸ್ಗೆ ಎಷ್ಟು ಸ್ಥಾನ, ಯಾವ ಕ್ಷೇತ್ರ ಎನ್ನುವುದು ಇಂದು ನಿರ್ಧಾರವಾಗುತ್ತೆ: ಆರ್ ಅಶೋಕ್