ಬೆಂಗಳೂರು:ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಸರ್ಕಾರ ಐಟಿ, ಬಿಟಿ ಕ್ಷೇತ್ರದಲ್ಲಿ ಹಲವು ಕೊಡುಗೆಗಳ ನಿರೀಕ್ಷೆಯಲ್ಲಿದೆ. ಈ ಸಂಬಂಧ ಈಗಾಗಲೇ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಸಚಿವರಿಗೆ ಮನವಿ ಪಟ್ಟಿ ಸಲ್ಲಿಸಿದ್ದಾರೆ.
ಐಟಿ, ಬಿಟಿ, ಸ್ಟಾರ್ಟ್ ಅಪ್ ಗಳ ಕೇಂದ್ರವಾದ ಕರ್ನಾಟಕ ಈ ಬಾರಿ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ಐಟಿ-ಬಿಟಿ ಕ್ಷೇತ್ರದ ಉತ್ತೇಜನಕ್ಕಾಗಿ ಹೆಚ್ಚಿನ ಯೋಜನೆಗಳನ್ನು ಘೋಷಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಐಟಿ, ಬಿಟಿ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಐ & ಬಿ ಸಚಿವರಾದ ಅಶ್ವಿನಿ ವೈಷ್ಣವ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೊಯೇಲ್ ಅವರನ್ನು ಭೇಟಿಯಾಗಿ ಬೇಡಿಕೆಯನ್ನೂ ಸಲ್ಲಿಸಿದ್ದರು.
ಗಿಫ್ಟ್ ಸಿಟಿ ರಚನೆಗೆ ಬೇಡಿಕೆ:ಅಹಮದಾಬಾದ್ ಸಬರಮತಿ ದಂಡೆಯಲ್ಲಿ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಮಾದರಿಯಲ್ಲಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯವು ಬೇಡಿಕೆ ಇಟ್ಟಿದೆ. ಇದರೊಟ್ಟಿಗೆ ಐಟಿ - ಬಿಟಿ ವಿಭಾಗದ ಅನೇಕ ಯೋಜನೆಗಳ ತ್ವರಿತ ಅನುಮತಿ ನೀಡುವಂತೆಯೂ ಒತ್ತಾಯ ಮಾಡಲಾಗಿದೆ.
ಟೆಕ್ ಹಬ್ ಮತ್ತು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಬೆಂಗಳೂರು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಡೊಮೇನ್, ಫಿನ್ಟೆಕ್ ಸ್ಪೇಸ್, ಎಂಟರ್ಪ್ರೈಸ್ ಟೆಕ್, ಇ-ಕಾಮರ್ಸ್ ಮತ್ತು ಎಡ್-ಟೆಕ್ ಕ್ಷೇತ್ರಗಳಲ್ಲಿ ತೆರೆದ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಮಾದರಿಯಲ್ಲಿ ಅವಕಾಶ ತೆರೆದಿಡುವ ಮೂಲಕ ಆರ್ಥಿಕ ಬೆಳವಣಿಗೆ ಉತ್ತೇಜಿಸುವುದರ ಜೊತೆಗೆ, ಹಲವಾರು ಉದ್ಯೋಗಾವಕಾಶಗಳ ಸೃಷ್ಟಿಗೆ ಅವಕಾಶ ಲಭ್ಯವಾಗಲಿದೆ. ಜೊತೆಗೆ ಯಥೇಚ್ಚವಾಗಿ ವಿದೇಶಿ ಹೂಡಿಕೆಗಳನ್ನೂ ಆಕರ್ಷಿಸಬಹುದು ಎಂದು ಮನವಿ ಮಾಡಿದ್ದಾರೆ.
ತ್ವರಿತಗತಿಯಲ್ಲಿ ಅನುಮೋದನೆಗೆ ಮನವಿ:ಕರ್ನಾಟಕವು ಅಲ್ಟ್ರಾ-ಮೆಗಾ ಮತ್ತು ಸೂಪರ್-ಮೆಗಾ ಉದ್ಯಮಗಳಿಗೆ 500 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಗಳನ್ನು ತರುವ ವಿಶೇಷ ಪ್ಯಾಕೇಜ್ಗಳನ್ನು ಒದಗಿಸುತ್ತದೆ. ಕರ್ನಾಟಕವು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಅದರ ಪೂರೈಕೆ-ಸರಪಳಿ ಪೂರಕಗಳಿಗಾಗಿ ಕೈಗಾರಿಕಾ ಪ್ರದೇಶಗಳನ್ನು ಮೀಸಲಿಟ್ಟಿದೆ. ಮೈಸೂರು, ಹುಬ್ಬಳ್ಳಿ - ಧಾರವಾಡ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸಮೀಪದ ಪ್ರದೇಶಗಳನ್ನು ಮೊಬೈಲ್ ಫೋನ್ ಅಸೆಂಬ್ಲಿ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.