ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಜನಪ್ರಿಯ ಬಜೆಟ್ ನೀಡುತ್ತದೆಯೇ? - ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ನಿರೀಕ್ಷಿತ ತೆರಿಗೆ ಪಾಲು ಹಾಗು ಅನುದಾನ ಸಿಗದ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಂಬರುವ ಬಜೆಟ್​ನಲ್ಲಿ ಭರಪೂರ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ವಿಧಾನಸೌಧ
ವಿಧಾನಸೌಧ

By ETV Bharat Karnataka Team

Published : Feb 12, 2024, 10:35 PM IST

ಬೆಂಗಳೂರು: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನಪ್ರಿಯ ಬಜೆಟ್ ನೀಡುತ್ತದೆಯೇ? ಅಥವಾ ಆರ್ಥಿಕ ಶಿಸ್ತಿನ ಅನಿವಾರ್ಯತೆ ಪ್ರದರ್ಶಿಸುತ್ತದೆಯೇ? ಎಂಬುದು ಈ ಬಾರಿಯ ಬಜೆಟ್ ಅಧಿವೇಶನ ಕುತೂಹಲ ಮೂಡಿಸಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರಕ್ಕೆ ಭಾರವಾಗಿರುವುದಂತೂ ಸತ್ಯ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಪಾಲು ಬಾರದ ಕಾರಣ ಮತ್ತಷ್ಟು ಸಮಸ್ಯೆಗೆ ಸಿಲುಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್​ನಲ್ಲಿ ಭರಪೂರ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸುಮಾರು 75,000 ಕೋಟಿ ರೂ. ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸುವುದಕ್ಕೆ ಸಿದ್ದರಾಮಯ್ಯ ಅವರಿಗೆ ಕಷ್ಟವಾಗಬಹುದು ಎಂದು ಹೇಳಲಾಗುತ್ತಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ ಹಲವು ಯೋಜನೆಗಳು ಆಡಳಿತಾತ್ಮಕ ಆದೇಶಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯರಿಗೆ ಈ ಬಾರಿಯ ಬಜೆಟ್‌ ಸಹ ಸವಾಲಾಗಿದೆ.

ಹಿಂದೆ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಸೈಕಲ್ ಭಾಗ್ಯ, ಭಾಗ್ಯಲಕ್ಷ್ಮಿ ಯೋಜನೆ ಜನಪ್ರಿಯ ಯೋಜನೆಗಳಾಗಿದ್ದವು. ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಮೀರಿ ರೈತರಿಗೆ ಬೆಳೆ ಪರಿಹಾರ, ಮನೆಹಾನಿ ಪರಿಹಾರ ದುಪ್ಪಟ್ಟು ಮಾಡಿದ್ದು ಇತಿಹಾಸ. ನೆರೆ ಹಾವಳಿ ಸಂದರ್ಭದಲ್ಲಿ ತೆಗೆದುಕೊಂಡ ಈ ತೀರ್ಮಾನದಿಂದ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿತ್ತು.

ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದು, ಇದೇ ಮಾದರಿಯ ಯೋಜನೆಯನ್ನು ಜಾರಿಗೆ ತರಬೇಕೆಂಬ ಆಲೋಚನೆ ಮುಖ್ಯಮಂತ್ರಿಗಳಲ್ಲಿದೆ. ರೈತ ಸಮುದಾಯವೇ ದೊಡ್ಡ ಪ್ರಮಾಣದಲ್ಲಿರುವ ಕಾರಣ ಅವರನ್ನು ತಲುಪುವ ಮತ್ತು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಒಂದಷ್ಟು ಚರ್ಚೆಗಳಾಗಿವೆ. ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಗ್ಯಾರಂಟಿ ಯೋಜನೆಗಳ ಭಾರವೇ ಹೆಚ್ಚಾಗಿರುವುದು ದೊಡ್ಡ ಸಮಸ್ಯೆಯಾಗಿದೆ.

ಕೈಗಾರಿಕಾ ವಲಯದ ನಿರೀಕ್ಷೆ: ದೇಶ ಹಾಗೂ ವಿದೇಶಗಳ ಜನರು ಬೆಂಗಳೂರಿನ ಕಡೆ ಮುಖ ಮಾಡುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ಐಟಿ, ಬಿಟಿ ಮತ್ತು ಕೈಗಾರಿಕೆಯಲ್ಲಿ ಗಮನ ಸೆಳೆದಿದೆ. ಆದರೆ, ಕೈಗಾರಿಕೆಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡಲು ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎನ್ನುವುದು ಪ್ರಮುಖವಾದ ದೂರು. ಈ ಬಾರಿಯಾದರೂ ಹೆಚ್ಚು ಅನುದಾನ ಸಿಗಬಹುದು ಎನ್ನುವ ನಿರೀಕ್ಷೆ ಕೈಗಾರಿಕೋದ್ಯಮಿಗಳದ್ದು. ವಿದ್ಯುತ್ ಅನ್ನು ರಿಯಾಯಿತಿ ದರದಲ್ಲಿ ಸರಬರಾಜು ಮಾಡಿ ಪ್ರೋತ್ಸಾಹ ನೀಡಬೇಕು ಎನ್ನುವ ಆಗ್ರಹವೂ ಇದೆ.

ಹೂಡಿಕೆ ಪುನರುಜ್ಜಿವನ, ಬೆಂಗಳೂರು ಹೊರತುಪಡಿಸಿದ ಮೂಲಸೌಕರ್ಯ ಅಭಿವೃದ್ಧಿ, ಎಂಎಸ್​ಎಂಇಗಳ ಅಭಿವೃದ್ಧಿ ಮತ್ತು ಅದರ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ, ಕೈಗಾರಿಕೆ ಮತ್ತು ಸೇವಾ ಚಟುವಟಿಕೆಗಳಿಗೆ ಆಸ್ತಿ ತೆರಿಗೆ ತರ್ಕಬದ್ಧಗೊಳಿಸುವುದು, ರಾಜ್ಯದಲ್ಲಿ ಪ್ರವಾಸಿ ವಲಯ ಉತ್ತೇಜನ, ವಿದ್ಯುತ್ ಸಂಬಂಧಿ ಸಮಸ್ಯೆಗಳು, ಉದ್ಯಮಿಗಳಿಗೆ ವ್ಯಾಪಾರ ಸುಲಭಗೊಳಿಸುವುದು, ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ, ಕೌಶಲ ಅಭಿವೃದ್ಧಿ ಚಟುವಟಿಕೆ, ಉತ್ಪಾದನಾ ವಲಯದಲ್ಲಿ ಉತ್ತಮ ಸಾಧನೆ, ಸಾಲದ ಹರಿವಿನ ಹೆಚ್ಚಳಕ್ಕೆ ಒತ್ತು, ಹಳೆಯ ಕಾನೂನು ರದ್ದುಪಡಿಸುವುದು, ಸೂಕ್ತ ಸಂಪನ್ಮೂಲ ಹಂಚಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಸ್ಯೆಗಳನ್ನು ಪರಿಹರಿಸುವಂತೆ ಕೈಗಾರಿಕೋದ್ಯಮಿಗಳು ಮನವಿ ಮಾಡಿದ್ದಾರೆ.

ಕಾರ್ಮಿಕ ಸಂಘಟನೆಗಳ ನಿರೀಕ್ಷೆಗಳೇನು?: ಗಂಟೆಗಳ ಕೆಲಸದ ಅವಧಿ ಹೆಚ್ಚಿಸಿರುವ ಹಿಂದಿನ ಸರ್ಕಾರದ ಆದೇಶ ವಾಪಸ್‌ ಪಡೆಯಬೇಕು. ಕಾರ್ಮಿಕ ಸಂಘಟನೆಗಳ ಮಾನ್ಯತೆಗಾಗಿ ಕಾನೂನು ರೂಪಿಸಬೇಕು. ಕನಿಷ್ಠ ಕೂಲಿ ಅನುಷ್ಠಾನ. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ತರಬೇಕು. ಅಂಗನವಾಡಿ, ಬಿಸಿಯೂಟ, ಆಶಾ ನೌಕರರಿಗೆ ಕನಿಷ್ಠ ವೇತನ. ನಿವೃತ್ತರಾಗಿರುವ ಬಿಸಿಯೂಟ ನೌಕರರಿಗೆ ಇಡುಗಂಟು ಹಣ ಜಾರಿಗೊಳಿಸಬೇಕೆಂದು ಕಾರ್ಮಿಕ ಸಂಘಟಗಳ ನಾಯಕಿ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.

ಸಾಲಮನ್ನಾ ನಿರೀಕ್ಷೆಯಲ್ಲಿ ರೈತರು: ರಾಜ್ಯ ಸರ್ಕಾರವೇ ಪ್ರತಿ ರೈತರಿಗೆ 5 ಲಕ್ಷ ರೂ. ವಿಮೆ ಮಾಡಿಸಿ ರೈತ ವಿಮಾ ಯೋಜನೆ ಜಾರಿಗೆ ತರಬೇಕು. ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳು ಪ್ರತಿ ಹೋಬಳಿಯಲ್ಲಿಯೂ ಪ್ರಾರಂಭಿಸಬೇಕು. ಕೃಷಿ ಯಂತ್ರೋಪಕರಣ ಮತ್ತು ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಮಾಡಬೇಕು ಎನ್ನುವುದು ರೈತರ ಬಹುವರ್ಷಗಳ ಬೇಡಿಕೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಬರ ಪರಿಹಾರ ಮೊತ್ತವನ್ನು ಎಕರೆಗೆ ಕನಿಷ್ಠ 10 ಸಾವಿರ ರೂ. ಮಾಡಬೇಕು. ಶೂನ್ಯ ಬಡ್ಡಿ ದರದ ಸಾಲ ಎಲ್ಲ ಕೃಷಿಕರಿಗೂ ಲಭ್ಯವಾಗುವಂತೆ ಮಾಡಬೇಕು ಎನ್ನುವುದು ರೈತರ ಹಕ್ಕೋತ್ತಾಯ.

ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ನಾಡಿನ ರೈತರು ಬರದ ಸಂಕಷ್ಟದಲ್ಲಿ ಸಿಲುಕಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಬರ ಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ, ಅದು ಪೂರ್ಣ ಪ್ರಮಾಣದ ಪರಿಹಾರವಾಗಲಾರದು. ಬರ ಇರುವ ಕಾರಣಕ್ಕಾಗಿ ಈ ಬಾರಿ ರೈತರ ಸಾಲವನ್ನು ಸಂಪೂರ್ಣವಾಗಿ ಒಮ್ಮೆ ಮನ್ನಾ ಮಾಡಲಿ ಎನ್ನುವುದು ರೈತ ಸಮುದಾಯದ ನಿರೀಕ್ಷೆ. ಹಿಂದಿನ ಸರ್ಕಾರದಲ್ಲಿ 50 ಸಾವಿರ ರೂ. ಸಾಲ ಮನ್ನಾ ಮಾಡಿದ್ದ ಸಿದ್ದರಾಮಯ್ಯ ಅವರು, ಈ ಬಾರಿ ಸಾಲ ಮನ್ನಾ ಮಾಡಲು ಮುಂದಾಗುವರೇ? ಎಂಬುದು ಕಾದುನೋಡಬೇಕು.

ವಸತಿ ವಲಯದ ನಿರೀಕ್ಷೆ: ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಸೂರು ಹೊಂದುವ ದಶಕಗಳ ಕನಸು ಇನ್ನೂ ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ. ಮಧ್ಯಮ ವರ್ಗದ ಮತ್ತು ಶ್ರಮಿಕ ಜನರು, ಕೂಲಿ ಕಾರ್ಮಿಕರು ನಗರದಲ್ಲಿ ಸ್ವಂತ ಸೂರು ಕಾಣುವುದು ಇನ್ನೂ ಕನಸಾಗಿಯೇ ಉಳಿದಿದೆ. ಅದಕ್ಕಾಗಿ ವಿಶೇಷ ವಸತಿ ಯೋಜನೆಗಳನ್ನು ರೂಪಿಸಿ, ಪ್ರತಿಯೊಬ್ಬರಿಗೂ ಸೂರು (ಮನೆ) ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮನೆಗಳ ನಿರ್ಮಾಣ ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಅದಕ್ಕೆ ಅನುದಾನ ಒದಗಿಸಬೇಕೆಂಬ ಒತ್ತಾಯವಿದೆ.

ಇದನ್ನೂ ಓದಿ:ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ರಾಜ್ಯಪಾಲರು

ABOUT THE AUTHOR

...view details