ಬೆಂಗಳೂರು:ರಾಜಧಾನಿ ಬೆಂಗಳೂರು ನಗರದಲ್ಲಿ ಸಾರ್ವಜನಿಕರು ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳ ಶೌಚಾಲಯಗಳನ್ನು ಬಳಸಲು ಸೂಕ್ತ ಆದೇಶ ಹೊರಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ನಡೆಸುತ್ತಿದೆ. ಶೌಚಾಲಯಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಲಿಕೆ ಹೈಕೋರ್ಟ್‌ಗೆ ತಿಳಿಸಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ಕೊರತೆಯಿರುವ ವಿಚಾರವಾಗಿ ಲೆಟ್ಜ್ ಕಿಟ್ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನೇತೃತ್ವದ ವಿಭಾಗೀಯ ಪೀಠದ ಬಿಬಿಎಂಪಿ ವರದಿ ಸಲ್ಲಿಸಿದೆ. ವಿಚಾರಣೆಯಲ್ಲಿ ಬಿಬಿಎಂಪಿ ಪರ ವಕೀಲರು ಹಾಜರಾಗಿ, ಸಾರ್ವಜನಿಕ ಶೌಚಾಲಯ ಕೊರತೆ ನೀಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ ಪ್ರವೀಣ್ ಲಿಂಗಯ್ಯ ಸಲ್ಲಿಸಿರುವ ವಸ್ತುಸ್ಥಿತಿ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ಈ ವರದಿ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 246 ಸಾರ್ವಜನಿಕ ಶೌಚಾಲಯ, 85 ಹಾಲಿ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು 229 ಇ-ಶೌಚಾಲಯಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ನಗರದಲ್ಲಿ ಜನಸಾಮಾನ್ಯರು ಮತ್ತು ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ 2023ರ ನ.29ರಂದು ಸಭೆ ನಡೆಸಿದೆ. ನಗರದಲ್ಲಿರುವ 172 ಇಂದಿರಾ ಕ್ಯಾಂಟೀನ್‌ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಅನುಮತಿಸವಂತೆ ಸಮಿತಿ ಅಧ್ಯಕ್ಷರು ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚಿಸಿದ್ದಾರೆ. ತಮ್ಮ ವಲಯದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪ್ರಮುಖ ಪ್ರದೇಶಗಳನ್ನು ಗುರುತಿಸುವಂತೆ ಎಲ್ಲಾ ವಲಯಗಳ ಆಯುಕ್ತರಿಗೆ ನಿರ್ದೇಶಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.