ಪುತ್ತೂರು (ದಕ್ಷಿಣ ಕನ್ನಡ) : ಇಲ್ಲಿನ ಕೋಡಿಂಬಾಡಿ ಸಮೀಪದ ಶಾಂತಿನಗರದ ಗೃಹಿಣಿಯೊಬ್ಬರು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ತನ್ನ ಪತಿಗೆ ಸ್ಕೂಟರ್ ಕೊಡಿಸಿ ಗಮನಸೆಳೆದಿದ್ದಾರೆ.
ಗೃಹಿಣಿ ಮಿಸ್ರಿಯಾ ಎಂಬುವರು ತನ್ನ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪತಿ ಸಲೀಂರಿಗಾಗಿ ಸ್ಕೂಟರ್ ಖರೀದಿಸಿದ್ದಾರೆ.
ವೃತ್ತಿಯಲ್ಲಿ ಪೈಂಟರ್ ಆಗಿರುವ ಸಲೀಂ ನಿತ್ಯ ದೂರದ ಊರುಗಳಿಗೆ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಪತಿ ಕೆಲಸಕ್ಕೆ ತೆರಳಲು ಪತ್ನಿ ಮಿಸ್ರಿಯಾ ಅವರ ಗೃಹಲಕ್ಷ್ಮಿ ಹಣ ಅನುಕೂಲ ಕಲ್ಪಿಸಿದೆ.
ಆರ್ಥಿಕ ನೆರವು ಗೃಹಲಕ್ಷ್ಮಿ ಭಿತ್ತಿಪತ್ರ :ತನ್ನ ಸ್ಕೂಟರ್ನಲ್ಲಿ ಸಲೀಂ 'ಆರ್ಥಿಕ ನೆರವು ಗೃಹಲಕ್ಷ್ಮಿ' ಎಂಬ ಭಿತ್ತಿಪತ್ರ ಅಂಟಿಸಿದ್ದು, ಅದರಲ್ಲಿ ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ಫೋಟೋ ಹಾಕಿದ್ದಾರೆ.
ಶಾಸಕರಿಂದ ಸನ್ಮಾನ :ಸಲೀಂ ತನ್ನ ಪತ್ನಿ ನೀಡಿದ ಸ್ಕೂಟರ್ನೊಂದಿಗೆ ಶಾಸಕ ಅಶೋಕ್ ಕುಮಾರ್ ರೈ ಅವರನ್ನ ಭೇಟಿಯಾಗಿ, ಸರ್ಕಾರದ ಗೃಹಲಕ್ಷ್ಮಿ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ. ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ ಎಂದಿರುವ ಅವರು, ಸರ್ಕಾರಕ್ಕೆ ಹಾಗೂ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಶಾಸಕರು ಸಲೀಂರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಇದನ್ನೂ ಓದಿ :ಗೃಹಲಕ್ಷ್ಮೀ ಹಣದಲ್ಲಿ ಖಾರ ಕುಟ್ಟುವ ಯಂತ್ರ ಖರೀದಿಸಿದ ಮಹಿಳೆ: ಭೇಷ್ ಎಂದ ಲಕ್ಷ್ಮೀ ಹೆಬ್ಬಾಳ್ಕರ್