ಮೈಸೂರು :ಪತಿ ಅಗಲಿಕೆಯಿಂದ ಮನನೊಂದ ಪತ್ನಿ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಸರಗೂರು ತಾಲ್ಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಂಖಹಳ್ಳಿ ಗ್ರಾಮದ ರಾಜನಾಯಕನ ಪತ್ನಿ ಗೀತಾ(40), 15 ವರ್ಷದ ಮಗಳು ಮೃತರು.
ಕಳೆದ ಕೆಲವು ದಿನಗಳ ಹಿಂದೆ ಗೀತಾ ಪತಿ ರಾಜನಾಯಕ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿಯ ಅಗಲಿಕೆಯ ನೋವಿನಿಂದ ಗೀತಾ ಹೊರ ಬಂದಿರಲಿಲ್ಲ. ತವರು ಮನೆಯವರು ಸಾಕಷ್ಟು ಆತ್ಮಸ್ಥೈರ್ಯ ತುಂಬಿದ್ದರು. ಆದರೂ ಪತಿಯ ಅಗಲಿಕೆಯಿಂದ ಬೇಸತ್ತಿದ್ದ ಗೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಸಾವಿನಲ್ಲಿ ಮಗಳು ಸಹ ಜೊತೆಯಾಗಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರರು ಸಾವು :ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹೆಳವರಹುಂಡಿ ಬಳಿ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬಿಳಿಗಿರಿ (30), ನರಸೀಪುರ ತಾಲ್ಲೂಕಿನ ಆದಿಬೆಟ್ಟಳ್ಳಿ ಗ್ರಾಮದ ನಾಗರಾಜು (35) ಮೃತರು ಎಂದು ಗುರತಿಸಲಾಗಿದೆ.
ಹಿಂಬದಿ ಬೈಕ್ ಸವಾರರಿಗೂ ಗಂಭೀರ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.