ಕರ್ನಾಟಕ

karnataka

ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು?: ಡಿ.ಕೆ.ಶಿವಕುಮಾರ್ - Valmiki Corporation Scam

By ETV Bharat Karnataka Team

Published : Jul 19, 2024, 11:25 AM IST

ವಾಲ್ಮೀಕಿ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಏನು ಸಂಬಂಧ?. ಅಧಿಕಾರಿಗಳು ಮಾಡಿದ ತಪ್ಪಿಗೆ ಮುಖ್ಯಮಂತ್ರಿಗಳನ್ನು ಗುರಿ ಮಾಡುವುದು ತಪ್ಪು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಡಿ. ಕೆ. ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

ಬೆಂಗಳೂರು:"ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ತಪ್ಪು ಮಾಡಿರುವುದು ಬ್ಯಾಂಕ್ ಮ್ಯಾನೇಜರ್. ಇದಕ್ಕೆ ಸಿದ್ದರಾಮಯ್ಯನವರು ಏಕೆ ರಾಜೀನಾಮೆ ಕೊಡಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ಧಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, "ಈ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಏನು ಸಂಬಂಧ?. ಅಧಿಕಾರಿ ತಪ್ಪು ಮಾಡಿದರೆ ಮುಖ್ಯಮಂತ್ರಿಗಳು ಹೇಗೆ ಜವಾಬ್ದಾರರಾಗುತ್ತಾರೆ?. ಬ್ಯಾಂಕ್​ ಅಧಿಕಾರಿ ಒಂದೇ ದಿನದಲ್ಲಿ ಆರೋಪಿಗಳಿಗೆ ಸಾಲ ಮಂಜೂರು ಮಾಡಿದ್ದಾರೆ. ಇದಕ್ಕೆ ಕೇಂದ್ರ ಹಣಕಾಸು ಸಚಿವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ?" ಎಂದು ಹೇಳಿದರು.

"ಪ್ರತಿಪಕ್ಷಗಳಿಗೆ ಸದನದ ಕಲಾಪಗಳ ನಡಾವಳಿಗಳ ಕುರಿತು ತಿಳುವಳಿಕೆಯಿಲ್ಲ. ಅವರಿಗೆ ನಾವು ಮಾತನಾಡಲು ಅವಕಾಶ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು, ಆದರೆ ನೀಡಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿದ್ದು, ನಮಗೂ ರಾಜಕೀಯ ಮಾಡಲು ಬರುತ್ತದೆ" ಎಂದು ತಿಳಿಸಿದರು.

"ನಾವು ಯಾವುದೇ ತಪ್ಪು ಮಾಡಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಕೆಲವು ಅಧಿಕಾರಿಗಳು ತಪ್ಪು ಮಾಡಿದ್ದು, ಇದನ್ನು ರಾಜಕೀಯವಾಗಿ ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಎಸ್​ಐಟಿ ರಚಿಸಿದ್ದೇವೆ. ಇಡಿ, ಸಿಬಿಐನಿಂದ ತನಿಖೆ ನಡೆಸಲಾಗುತ್ತಿದೆ. ದೊಡ್ಡ ಕಾರ್ಪೊರೇಟ್​​ ಕಂಪನಿಯಲ್ಲಿ ಯಾರೋ ನೌಕರ ತಪ್ಪು ಮಾಡುತ್ತಾನೆ. ಅದಕ್ಕೆ ಕಂಪನಿಯ ಮುಖ್ಯಸ್ಥನನ್ನು ಗುರಿ ಮಾಡಲು ಆಗುತ್ತದೆಯೇ?" ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಇದನ್ನೂ ಓದಿ:ಆದಾಯಕ್ಕಿಂತ ಅಧಿಕ ಆಸ್ತಿ: ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ - Lokayukta Raid

ABOUT THE AUTHOR

...view details