ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ನಟ ದರ್ಶನ್ ಹಾಗೂ ಇನ್ನಿತರ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ ಆರೋಪ ಸಂಬಂಧ ವಿಚಾರಣಾಧೀನ ಕೈದಿಗಳಾಗಿರುವ ವಿಲ್ಸನ್ ಗಾರ್ಡನ್ ನಾಗ ಹಾಗೂ ವೇಲು ಎಂಬವರನ್ನು ಕೋರ್ಟ್ ಮೂರು ದಿನಗಳ ಕಾಲ ಪರಪ್ಪನ ಅಗ್ರಹಾರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಇಂದು 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಕೋರ್ಟ್, ಮೂರು ದಿನಗಳ ಕಾಲ ಅಂದರೆ ಸೆಪ್ಟೆಂಬರ್ 21ರ ಸಂಜೆ 4.30ರವರೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲು ಅನುಮತಿ ನೀಡಿತು.
ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ವಿಲ್ಸನ್ ಗಾರ್ಡನ್ ನಾಗ, ದರ್ಶನ್, ಕುಳ್ಳ ಸೀನಾ ಹಾಗೂ ದರ್ಶನ್ ಸಹಚರ ನಾಗರಾಜು ಇರುವ ಫೋಟೋವನ್ನು ನಾಗನ ಸಹಚರ ವೇಲು ಮೊಬೈಲ್ನಲ್ಲಿ ಸೆರೆಹಿಡಿದಿದ್ದ. ದರ್ಶನ್ ಒಂದು ಕೈನಲ್ಲಿ ಕಾಫಿ ಮಗ್, ಇನ್ನೊಂದು ಕೈಯಲ್ಲಿ ಸಿಗರೇಟು ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿ, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜೈಲಿನ ಅಧೀಕ್ಷಕರು ಸೇರಿ 9ಕ್ಕಿಂತ ಹೆಚ್ಚು ಸಿಬ್ಬಂದಿ ಅಮಾನತಾಗಿದ್ದರು. ಬಳಿಕ ಕೋರ್ಟ್ ಆದೇಶದ ಮೇರೆಗೆ, ದರ್ಶನ್ ಹಾಗೂ ಇತರ ಆರೋಪಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ ಆರೋಪ: ಶಾಸಕ ಮುನಿರತ್ನ ಸೇರಿ 7 ಮಂದಿ ವಿರುದ್ಧ ಪ್ರಕರಣ - Case Against Munirathna