ಶಿವಮೊಗ್ಗ: ದೇಶದ ಹಿರಿಯ ಕರಡಿ ಎಂದೇ ಖ್ಯಾತಿ ಪಡೆದಿರುವ ರಾಣಿ ಎಂಬ ಹೆಸರಿನ ಕರಡಿ ಶಿವಮೊಗ್ಗ ತಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿದೆ. ಸದ್ಯ ರಾಣಿಗೆ 35ರ ಪ್ರಾಯ. ಹಾಲಿ ಹುಲಿ- ಸಿಂಹಧಾಮದ ಅತ್ಯಂತ ಸೀನಿಯರ್ ಪ್ರಾಣಿ ಅಂದ್ರೆ ಇದೇ ಆಗಿದೆ. ಕಾರಣ ಏನಂದ್ರೆ, ಈ ಕರಡಿಯು ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಇದ್ದ ಕಿರು ಮೃಗಾಲಯದಲ್ಲಿತ್ತು. ಇದನ್ನು ತಾವು ಕುರಿ ಮೇಯಿಸುವಾಗ ಸಿಕ್ಕಿದೆ ಎಂದು ಕುರಿಗಾಹಿಯೊಬ್ಬರು ಬಂದು ಮೃಗಾಲಯಕ್ಕೆ ತಂದುಕೊಟ್ಟಿದ್ದರು. ಅಂದಿನಿಂದ ಇದು ಮೃಗಾಲಯದ ಸಹಾಯಕರ ಕೈಯಲ್ಲೇ ಬೆಳೆದಿದೆ. ರಾಣಿ ಆರೋಗ್ಯವಾಗಿಯೇ ಇದ್ದು, ತನಗೆ ನೀಡಿದ ಎಲ್ಲ ಆಹಾರವನ್ನು ತಿನ್ನುತ್ತಾ ಇದು ಮೃಗಾಲಯಕ್ಕೆ ಬರುವವರನ್ನು ರಂಜಿಸುತ್ತಿದೆ.
ರಾಣಿಯೊಂದಿಗಿವೆ ಗಜೇಂದ್ರ, ರ್ಯಾಂಬೊ ಮತ್ತು ಗಾಯತ್ರಿ; ಈ ರಾಣಿಯ ಜೊತೆ ಈಗ ಇನ್ನೂ ಮೂರು ಕರಡಿಗಳು ಇಲ್ಲಿವೆ. ಗಜೇಂದ್ರ, ರ್ಯಾಂಬೊ ಹಾಗೂ ಗಾಯಿತ್ರಿ ಎಂಬ ಕರಡಿಗಳಿವೆ. ಇವೆಲ್ಲವು ಸುಮಾರು 8 ವರ್ಷದ ಪ್ರಾಯದ್ದಾಗಿವೆ. ರಾಣಿ ಕರಡಿಯು ಕಿರು ಮೃಗಾಲಯದಲ್ಲಿ ಸಣ್ಣದಾದ ಪಂಜರದಲ್ಲಿತ್ತು. ನಂತರ ಹುಲಿ-ಸಿಂಹಧಾಮದಲ್ಲಿ ಸ್ವಲ್ಪ ದೊಡ್ಡದಾದ ಪಂಜರದಲ್ಲಿತ್ತು. ಈಗ ಮೃಗಾಲಯ ಪ್ರಾಧಿಕಾರದ ಆದೇಶದಂತೆ ಕೇಜ್ ಕ್ಕಿಂತ ದೊಡ್ಡದಾದ ಮೇಲ್ಚಾವಣಿ ತೆರೆದ ಸುತ್ತ ಬೇಲಿಯನ್ನು ಹೊಂದಿರುವ ಪ್ರವಾಸಿಗರಿಗೆ ನೇರವಾಗಿ ಕಾಣುವಂತಹ ದೊಡ್ಡ ಕೇಜ್ ಗೆ ಬಂದಿದೆ. ಕರಡಿಯು ಸಣ್ಣದಾದ ಪಂಜರದಲ್ಲಿ ಹೇಗಿತ್ತು, ಈಗ ಹೇಗಿದೆ ಎಂಬುದರ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಸದ್ಯ ಕರಡಿ ರಾಣಿ ಇಲ್ಲಿನ ಪ್ರವಾಸಿಗರಿಗೆ ಆಕರ್ಷಣೆಯಾಗಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ತಾವರೆಕೊಪ್ಪ ಹುಲಿ-ಸಿಂಹಧಾಮದ ಸಿಇಒ ಅಮರಾಕ್ಷರ, ಇಂದು ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಐತಿಹಾಸಿಕ ದಿನವಾಗಿದೆ. ನಮ್ಮ ಮೃಗಾಲಯದಲ್ಲಿ ಅತಿ ಹಿರಿಯ 35 ವರ್ಷ ವಯಸ್ಸಿನ ಕರಡಿ ಇದೆ. ಅದರ ಹೆಸರು ರಾಣಿ. ಇದು ನಮಗೆ ಕುರಿಗಾಹಿಯ ಮೂಲಕ 1990 ರಲ್ಲಿ ಶಿವಮೊಗ್ಗದ ಕಿರು ಮೃಗಾಲಯಕ್ಕೆ ಬಂದಿತ್ತು. ಈ ಕರಡಿ ಹಿಂದೆ ಸಣ್ಣದೊಂದು ಕೇಜ್ನಲ್ಲಿತ್ತು. ನಂತರ ಶಿವಮೊಗ್ಗದ ಕಿರು ಮೃಗಾಲಯವನ್ನು ತಾವರೆಕೊಪ್ಪಕ್ಕೆ ಶಿಫ್ಟ್ ಮಾಡಲಾಗಿತ್ತು. ಇಲ್ಲಿ ಅದು ಸ್ವಲ್ಪ ದೊಡ್ಡದಾದ ಪಂಜರದಲ್ಲಿತ್ತು. ಇದು ಅದರ ಮೂರನೇ ಮನೆಯಂತಾನೇ ಹೇಳಬಹುದು. ಇಂದು ಅದನ್ನು ನಮ್ಮ ಕೇಂದ್ರೀಯ ಮೃಗಾಲಯದ ನಿಯಮದಂತೆ ಅದಕ್ಕೆ ದೊಡ್ಡದಾದ ಬಯಲು ಪಂಜರಕ್ಕೆ ಬಿಡಲಾಗಿದೆ. ಇದರಿಂದ ಕರಡಿಯು ತನ್ನ ನೈಸರ್ಗಿಕವಾಗಿ ಜೀವಿಸಬಹುದಾಗಿದೆ. ಇದರಿಂದ ಅದರ ಆರೋಗ್ಯವೂ ಸಹ ಉತ್ತಮವಾಗುತ್ತದೆ ಎಂದರು.
ಹಿರಿಯ ರಾಣಿಯ ಜೊತೆ ರ್ಯಾಂಬೋ, ಗಜೇಂದ್ರ, ಗಾಯಿತ್ರಿ ಮೂರು ಕರಡಿಗಳು ಸಹ ಇಲ್ಲೇ ಇವೆ. ಇವುಗಳಿಗೆ ಸುಮಾರು 8-9 ವರ್ಷಗಳು ಇರಬಹುದು. ಇವುಗಳು ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿ ಸಣ್ಣದಾಗಿದ್ದಾಗ ಸಿಕ್ಕಿದ್ದವು. ಕರಡಿಗಳು ಪ್ರಕೃತಿಯ ನೈಸರ್ಗಿಕ ಬದಲಾವಣೆಯಲ್ಲಿ ಎಷ್ಟು ಮುಖ್ಯ ಎಂಬುದನ್ನು ತೋರಿಸಲು ಸಹಾಯಕವಾಗಿವೆ. ಈಗ ಕರಡಿಗಳು ತಮ್ಮ ಹೊಸ ಮನೆಯಲ್ಲಿ ಚೆನ್ನಾಗಿವೆ. ಪ್ರವಾಸಿಗರು ಸಹ ಕರಡಿಗಳನ್ನು ನೋಡಿ ಸಂತೋಷ ಪಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪ್ರವಾಸಿ ಇಂಚರ ಮಾತನಾಡಿ, ನಾನು ಹುಲಿ ಮತ್ತು ಸಿಂಹಧಾಮಕ್ಕೆ ಬಂದು ಸಾಕಷ್ಟು ಪ್ರಾಣಿಗಳನ್ನು ನೋಡಿದ್ದೇನೆ. ಇದರಿಂದ ಖುಷಿಯಾಯಿತು. ಇಲ್ಲಿನ ಕರಡಿ ರಾಣಿ ಸುಮಾರು 35 ವರ್ಷ ಬದುಕಿದೆ ಎಂದು ಕೇಳಿ ಆಶ್ಚರ್ಯವಾಯಿತು ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೋಟೆಲ್ ಗೆ ಬಂದ ಗಜರಾಜ, ನಂತರ ಆಗಿದ್ದೇನು? - Wild elephant at hotel