ಬೆಂಗಳೂರು:ಮುಡಾ ಹಗರಣ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟಗಳನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17ಎ ಹಾಗೂ ಭಾರತೀಯ ಸುರಕ್ಷಾ ಸಂಹಿತೆಯ 218ರ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮೋದಿಸಿದ್ದಾರೆ. ಪೂರ್ವಾನುಮತಿ ಹಿನ್ನೆಲೆ ಸಿಎಂ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ಇದಕ್ಕೂ ಮುನ್ನ ಪೂರ್ವಾನುಮತಿ ಪತ್ರ ಹಾಗೂ ಆರೋಪಕ್ಕೆ ಪುಷ್ಠಿ ನೀಡುವ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಇದಕ್ಕೆ ಪೂರಕವೆಂಬಂತೆ ದೂರುದಾರರಾದ ಸ್ನೇಹಮಯಿ ಕೃಷ್ಣ ಹಾಗೂ ಟಿ.ಜೆ. ಅಬ್ರಹಾಂ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕ್ರಮವಾಗಿ ಆ.20 ಹಾಗೂ 21ರಂದು ನಡೆಯಲಿದೆ.
ವಿಚಾರಣೆ ನಡೆಸುವ ನ್ಯಾಯಾಲಯವು ತನಿಖೆಗೆ ಆದೇಶಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಲ್ಲದೇ, ನ್ಯಾಯಾಲಯವು ನೇರವಾಗಿ ಕಾಗ್ನಿಝನ್ಸ್ ದೂರು ದಾಖಲಿಸಿಕೊಂಡು ಸಿಎಂಗೆ ಸಮನ್ಸ್ ಜಾರಿ ಮಾಡಬಹುದಾಗಿದೆ. ಸಮನ್ಸ್ ಜಾರಿಯಾದರೆ ನ್ಯಾಯಾಲಯದ ಮುಂದೆ ಸಿದ್ದರಾಮಯ್ಯ ಅವರು ಹಾಜರಾಗುವ ಅನಿವಾರ್ಯತೆ ಎದುರಾಗಲಿದೆ.