ಬೆಂಗಳೂರು: ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಇ- ಶ್ರಮ್' ಯೋಜನೆಯನ್ನು ಆರಂಭಿಸಿದೆ. ಎಲ್ಲ ಅಸಂಘಟಿತ ಕಾರ್ಮಿಕರ ಡೇಟಾವನ್ನು ಸಂಗ್ರಹಿಸಲು ಹಾಗೂ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸರ್ಕಾರವು ಇ-ಶ್ರಮ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
ಅಸಮಾನತೆಯನ್ನು ಹೋಗಲಾಡಿಸಲು ಇ-ಶ್ರಮ್ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿರುವ 45 ಕೋಟಿ ಅಸಂಘಟಿತರ ಪೈಕಿ ಸುಮಾರು 30 ಕೋಟಿ ಮಂದಿ ಇ-ಶ್ರಮ್ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಗೆ ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಚಾಲಕರು, ಮನೆಗೆಲಸದವರು ಸೇರಿ 379 ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸೇರ್ಪಡೆ ಮಾಡಲಾಗಿದೆ.
ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗಿದೆ. ಈ ಕಾರ್ಡ್‌ನಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಮಂಡಳಿಯಿಂದ ಸಪ್ತ ಯೋಜನೆ ಕರ್ನಾಟಕದಲ್ಲಿ ಶ್ರಮಿಕ ವರ್ಗದವರಿಗಾಗಿ ರಾಜ್ಯ ಸರ್ಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿವೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ನೆರವು, ಆರೋಗ್ಯ ನೆರವು ಸಹಿತ 7 ಕಾರ್ಯಕ್ರಮಗಳನ್ನು ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅನುಷ್ಠಾನದ ಹೊಣೆ ವಹಿಸಲಾಗಿದೆ. ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ಮೊತ್ತವನ್ನು ಪಡೆಯುವ ಯಾವುದೇ ಕಾರ್ಮಿಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಏನಿದು ಇ-ಶ್ರಮ್ ಕಾರ್ಡ್?: ಇ-ಶ್ರಮ್ ಒಂದು ಕ್ರಾಂತಿಕಾರಿ ಉಪಕ್ರಮವಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ಸುರಕ್ಷತಾ ಜಾಲವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಸಮಗ್ರ ಡೇಟಾ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಮಿಕರನ್ನು ನೋಂದಾಯಿಸುವುದು ಮಾತ್ರವಲ್ಲದೆ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಪ್ರಯೋಜನಗಳಿಗೆ ಅವರ ಪ್ರವೇಶವನ್ನು ಸುಲಭಗೊಳಿಸುತ್ತದೆ.
ಇದು ಕಾರ್ಮಿಕರಾಗಿ ಕೆಲಸ ಮಾಡುವ ವ್ಯಕ್ತಿಗಳು, ದಿನಗೂಲಿ ಗಳಿಸುವವರು ಮತ್ತು ಅನೌಪಚಾರಿಕ ಉದ್ಯೋಗದಲ್ಲಿರುವ ಇತರರನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ, ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)/ನೌಕರರ ರಾಜ್ಯ ವಿಮಾ ನಿಗಮ (ESIC) ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ನ ಸದಸ್ಯರಾಗಬಾರದು.
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಇ-ಶ್ರಮ್ ಕಾರ್ಡ್ ಫಾರ್ಮ್‌ಗೆ ಅರ್ಜಿ ಸಲ್ಲಿಸಬಹುದು, ಅದರ ಮೂಲಕ ಅವರು ಮರಣ ವಿಮೆ, 60 ವರ್ಷಗಳ ನಂತರ ಪಿಂಚಣಿ ಮತ್ತು ಅಸಮರ್ಥತೆಯ ಸಂದರ್ಭದಲ್ಲಿ ಇತರ ರೀತಿಯ ಆರ್ಥಿಕ ಸಹಾಯದಂತಹ ವಿವಿಧ ಇ-ಶ್ರಾಮ್ ಕಾರ್ಡ್ ಪ್ರಯೋಜನಗಳನ್ನು ಪಡೆಯಬಹುದು.
ಇ-ಶ್ರಮ್ ಕಾರ್ಡ್ ಪ್ರಯೋಜನಗಳೇನು?: ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಉದ್ಯೋಗಿಗಳಿಗೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. 60 ವರ್ಷ ತುಂಬಿದ ನಂತರ ತಿಂಗಳಿಗೆ 3 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ. ಪಿಂಚಣಿದಾರ ಮೃತನಾದಲ್ಲಿ ಆತನ ಪತ್ನಿ/ಪತಿ ಅಥವಾ ಅವಲಂಬಿತರಿಗೆ ಪಿಂಚಣಿ ಸಿಗಲಿದೆ.