ಬೆಂಗಳೂರು:ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿರುವ ಹಾಗೂ ರಾಜ್ಯ ರಾಜಕಾರಣದಲ್ಲೇ ತೀವ್ರ ಸಂಚಲನ ಮೂಡಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ಡ್ರೈವ್ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಮತ್ತೊಂದೆಡೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಎಚ್.ಡಿ.ರೇವಣ್ಣ ವಿರುದ್ಧ ಪ್ರಕರಣ ದಾಖಲಾದ ಬೆನ್ನಲೇ ಕೆ.ಆರ್.ನಗರದ ಮಹಿಳೆಯನ್ನ ಅಪಹರಣ ಪ್ರಕರಣದಡಿ ರೇವಣ್ಣ ಅವರನ್ನ ಎಸ್ಐಟಿ ಬಂಧಿಸಿ, ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ. ಇದರ ಬೆನ್ನಲೇ ಪ್ರಜ್ವಲ್ ವಿದೇಶದಲ್ಲಿರುವುದರಿಂದ ಬಂಧನಕ್ಕೆ ಹಿನ್ನೆಡೆಯಾಗಿದೆ. ಈ ಮಧ್ಯೆ ಏಳು ದಿನಗಳ ಸಮಯಾವಕಾಶ ನೀಡುವಂತೆ ವಿದೇಶದಲ್ಲಿದ್ದುಕೊಂಡೇ ಮಾಡಿದ ಮನವಿಯನ್ನು ಎಸ್ಐಟಿ ತಿರಸ್ಕರಿಸಿತ್ತು. ಹೀಗಾಗಿ ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೊಟೀಸ್ ನೀಡಲು ಎಸ್ಐಟಿ ಮುಂದಾಗಿದೆ. ಆದ್ರೆ ರೆಡ್ ಕಾರ್ನರ್ ನೊಟೀಸ್ ನೀಡಬೇಕು ಎಂಬ ಒತ್ತಡವೂ ಕೇಳಿಬರುತ್ತಿದೆ. ಹಾಗಾದರೆ ಬ್ಲೂ ಹಾಗೂ ರೆಡ್ ಕಾರ್ನರ್ ನೊಟೀಸ್ಗಳು ಏನನ್ನೂ ಸೂಚಿಸುತ್ತದೆ. ಇಂತಹ ನೊಟೀಸ್ಗಳಲ್ಲಿ ಎಷ್ಟು ವಿಧಗಳಿವೆ ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಇಂಟರ್ ಪೋಲ್ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದೆ. ಭಾರತದಲ್ಲಿ ಸಿಬಿಐ ನೊಡಲ್ ಸಂಸ್ಥೆಯಾಗಿದೆ. ಇದು ದೇಶದ ಗೆರೆ ದಾಟಿ ತಲೆಮರೆಸಿಕೊಳ್ಳುವ ಕ್ರಿಮಿನಲ್ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ವೇದಿಕೆಯಾಗಿದೆ. ಬಹು ಬಗೆಯ ಕ್ರಿಮಿನಲ್ಗಳ ಬಗ್ಗೆ ಅರಿಯಲು, ಬಂಧಿಸಲು ಅಥವಾ ಈ ಬಗ್ಗೆ ಎಚ್ಚರಿಕೆ ಕೊಡಲು ಇಂಟರ್ ಪೋಲ್ ಮೂಲಕ ವಿವಿಧ ನೋಟಿಸ್ ನೀಡಲಾಗುತ್ತದೆ. ನಿರ್ದಿಷ್ಟ ಅಪರಾಧಗಳಿಗೆ ನಿಗದಿತ ಬಣ್ಣದ ನೋಟಿಸ್ನ್ನ ಜಾರಿ ಮಾಡಲಾಗುತ್ತದೆ. ಇಂತಹ ನೋಟಿಸ್ಗಳಲ್ಲಿ ಏಳು ವಿಧಗಳಿವೆ. ಕೆಂಪು, ಹಳದಿ, ನೀಲಿ, ಕಪ್ಪು, ಹಸಿರು, ಕಿತ್ತಳೆ ಹಾಗೂ ನೇರಳ ಕಾರ್ನರ್ ನೋಟಿಸ್ಗಳಿವೆ.
ರೆಡ್ ಕಾರ್ನರ್ ನೊಟೀಸ್ ಎಂದರೇನು ?:ವಾಂಟೆಡ್ ಕ್ರಿಮಿನಲ್ಗಳು ದೇಶದಿಂದ ಪಲಾಯನ ಮಾಡುವ ಸಾಧ್ಯತೆಗಳಿದ್ದರೆ ಅಥವಾ ದೇಶದಿಂದ ವಿದೇಶಕ್ಕೆ ಪರಾರಿಯಾದಾಗ ಆತನನ್ನ ಬಂಧಿಸುವ ಸಲುವಾಗಿ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ನೀಡಿ ಬಂಧಿಸಲು ನೀಡುವ ನೋಟಿಸ್ ಅನ್ನು ರೆಡ್ ಕಾರ್ನರ್ ನೊಟೀಸ್ ಎಂದು ಕರೆಯಲಾಗುತ್ತದೆ.
ಬ್ಲೂ ಕಾರ್ನರ್ ನೋಟಿಸ್:ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ದೇಶದಿಂದ ತಲೆಮರೆಸಿಕೊಂಡಿರುವ ಆರೋಪಿ ವಿಳಾಸ ಹಾಗೂ ಇರುವಿಕೆಯನ್ನ ಪತ್ತೆ ಹಚ್ಚಲು ನೀಡುವುದೇ ಬ್ಲೂ ಕಾರ್ನರ್ ನೊಟೀಸ್. ಸದ್ಯ ಪ್ರಜ್ವಲ್ ರೇವಣ್ಣನಿಗೆ ಈ ನೊಟೀಸ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.