ಕರ್ನಾಟಕ

karnataka

ETV Bharat / state

ನೇಕಾರನ ಮಗ, ಆಟೋ ಚಾಲಕನ ಮಗಳ ಬಂಗಾರದ ಬೇಟೆ : ಇದು ಬಡವರ ಮನೆ ಮಕ್ಕಳ ಸಾಧನೆ - VTU GOLD MEDAL ACHIEVERS - VTU GOLD MEDAL ACHIEVERS

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ನೇಕಾರನ ಮಗ 7 ಚಿನ್ನದ ಪದಕ ಪಡೆದಿದ್ದಾರೆ.

weaver-son-got-7-gold-medals-in-vtu-convocation
ನೇಕಾರನ ಮಗ, ಆಟೋ ಚಾಲಕನ ಮಗಳ ಬಂಗಾರದ ಬೇಟೆ (ETV Bharat)

By ETV Bharat Karnataka Team

Published : Jul 18, 2024, 7:28 PM IST

Updated : Jul 18, 2024, 8:08 PM IST

ಚಿನ್ನದ ಪದಕ ಪಡೆದ ವಿದ್ಯಾರ್ಥಿ ಮೋಹನ್ ಕುಮಾರ್ ಎಲ್ ಮಾತನಾಡಿದರು (ETV Bharat)

ಬೆಳಗಾವಿ :ಬಡತನ ಸಾಧನೆಗೆ ಅಡ್ಡಿ ಆಗುವುದಿಲ್ಲ ಎಂಬುದನ್ನು ಕೂಲಿ ನೇಕಾರನ ಪುತ್ರ ಮತ್ತು ಬಡ ಆಟೋ ಚಾಲಕನ ಪುತ್ರಿ ನಿರೂಪಿಸಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಪದಕಗಳ ಬೇಟೆಯಾಡಿದ್ದಾರೆ. ಇನ್ನು ಮಕ್ಕಳ ಸಾಧನೆ ಕಂಡು ತಂದೆ-ತಾಯಿ ಸಾರ್ಥಕತೆ ಭಾವ ಹೊರ ಹಾಕಿದ್ದಾರೆ.

ಬಡವರ ಮನೆ ಮಕ್ಕಳು ಬೆಳೆಯಬೇಕು ಎನ್ನುವ ಮಾತಿನಂತೆ ಬಡ ಪ್ರತಿಭಾನ್ವಿತ ಮಕ್ಕಳು ಕಷ್ಟಪಟ್ಟು ಸಾಧನೆ ಮೆರೆದಿದ್ದಾರೆ. ಬೆಂಗಳೂರು ಎಸ್.ಜೆ.ಬಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮೋಹನ್​ಕುಮಾರ್​ ಎಲ್ ಬರೋಬ್ಬರಿ 7 ಚಿನ್ನದ ಪದಕ ಪಡೆದಿದ್ದಾರೆ.

ಮೋಹನ್​ಕುಮಾರ್ ತಂದೆ ಲೋಕೇಶ್ ವೃತ್ತಿಯಲ್ಲಿ ಕೂಲಿ ನೇಕಾರ. ಇವರಿಗೆ ಇಬ್ಬರು ಪುತ್ರಿಯರು ಮತ್ತು‌ ಓರ್ವ ಪುತ್ರ. ಕೂಲಿ ನಾಲಿ ಮಾಡಿ ಮೂವರು ಮಕ್ಕಳಿಗೂ ಒಳ್ಳೆಯ ಶಿಕ್ಷಣ ನೀಡಿದ್ದಾರೆ‌‌. ಈಗ ಮಗ 7 ಚಿನ್ನದ ಪದಕ ಪಡೆದ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಲೋಕೇಶ್, ''ನೇಕಾರಿಕೆ, ಕೂಲಿ ಕೆಲಸ ಮಾಡುತ್ತೇನೆ. ವಾರದ ಸಂಬಳದಲ್ಲಿ ಮಕ್ಕಳನ್ನು ಬೆಳೆಸಿದ್ದೇನೆ. ಮಗನ ಸಾಧನೆ ನೋಡಿ ಏನು ಮಾತಾಡಬೇಕು ಅಂತ ತಿಳಿಯುತ್ತಿಲ್ಲ. ತುಂಬಾ ಖುಷಿ ಆಗುತ್ತಿದೆ'' ಎಂದಿದ್ದಾರೆ.

ಚಿನ್ನದ ಹುಡುಗ ಮೋಹನ್ ಕುಮಾರ್ ಎಲ್ ಮಾತನಾಡಿ, ''ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಾನು ಬೇರೆಯವರಿಗೆ ಹೇಳಿಕೊಡುತ್ತಿದ್ದೆ. ಇದರಿಂದ ನಾನು ಓದಿದ್ದು ಚೆನ್ನಾಗಿ ನೆನಪಲ್ಲಿ ಉಳಿಯುತ್ತಿತ್ತು. ಗೊತ್ತಿಲ್ಲದ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೆವು. ಇದರಿಂದ ಹೆಚ್ಚಿಗೆ ಅಂಕ ಗಳಿಸಲು ಸಾಧ್ಯವಾಯಿತು. ಈಗ ಒಂದು ತಿಂಗಳಿನಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ‌. ಮುಂದೆ ಕೇಂದ್ರದಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇನೆ. ತಾಯಿ ತೀರಿಕೊಂಡು 21 ವರ್ಷ ಆಗಿದೆ‌‌. ಆಗಿನಿಂದ ಕಷ್ಟಪಟ್ಟು ಬೆಳೆಸಿರುವ ತಂದೆಗೆ ನಾನು ಇಷ್ಟು ಮಾಡದಿದ್ದರೆ ಹೇಗೆ? ನಾವು ಏನೇ ಸಾಧನೆ ಮಾಡಿದರೂ ನನ್ನ ತಂದೆಗೆ ಸಮರ್ಪಣೆ'' ಎಂದು ಹೇಳಿದರು.

ಆಟೋ ಚಾಲಕನ ಚಿನ್ನದ ಪುತ್ರಿ : ಬೆಳಗಾವಿಯ ಅಂಗಡಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್​ಮೆಂಟ್ ಕಾಲೇಜಿನ ವಿದ್ಯಾರ್ಥಿ ಮೇಘನಾ ಅನಿಲ ಪವಾರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್​ ಡೇಟಾ ಸೈನ್ಸ್‌ನಲ್ಲಿ 1 ಚಿನ್ನದ ಪದಕ ಪಡೆದಿದ್ದಾರೆ. ಮೇಘನಾ ತಂದೆ ಅನಿಲ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ. ಸರ್ಕಾರಿ ಕೋಟಾದಡಿ ಅಂಗಡಿ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು. ಈಗ ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದ್ದಾರೆ.

ಮಗಳ ಸಾಧನೆಗೆ ತಂದೆ-ತಾಯಿ, ಕಾಲೇಜು ವೃಂದ ಹಿರಿ ಹಿರಿ ಹಿಗ್ಗಿದೆ. ಅನಿಲ್ ಅವರ ಕಿರಿಯ ಮಗಳು ಕೂಡ ಪ್ರತಿಭಾವಂತೆ. ಅಂಗಡಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆದಿದ್ದಾರೆ. ''ಪ್ರತಿದಿನ 2-3 ಗಂಟೆ ಅಭ್ಯಾಸ ಮಾಡುತ್ತಿದ್ದೆ. ನನಗೆ ಪ್ರೋತ್ಸಾಹಿಸಿದ ತಂದೆ-ತಾಯಿ, ವಿಭಾಗದ ಮುಖ್ಯಸ್ಥ ಸಾಗರ ಬಿರ್ಜೆ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಮುಂದೆ ಡೇಟಾ ಸೈನ್ಸ್​ನಲ್ಲಿ ಉನ್ನತ ಶಿಕ್ಷಣ ಮುಂದುವರಿಸುವ ಬಯಕೆಯಿದೆ'' ಎಂದು ಮೇಘನಾ ಹೇಳಿದ್ದಾರೆ.

10 ಚಿನ್ನದ ಪದಕ ಪಡೆದಿರುವ ಬೆಂಗಳೂರು ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಜಿ‌. ವಿಷ್ಣು ಪ್ರಿಯಾ ಮಾತನಾಡಿ, ''ಈ ಸಾಧನೆಯಲ್ಲಿ ನನ್ನ ತಂದೆ-ತಾಯಿ ಪಾತ್ರ ಬಹಳ ದೊಡ್ಡದಿದೆ. ಅವರು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಈ ಪದಕಗಳನ್ನು ಅವರಿಗೆ ಅರ್ಪಿಸುತ್ತೇನೆ. ಮುಂದೆ ಯುಪಿಎಸ್​ಸಿ ಪರೀಕ್ಷೆ ಎದುರಿಸಬೇಕು ಅಂದುಕೊಂಡಿದ್ದೇನೆ'' ಎಂದು ತಮ್ಮ‌ ಮನದ ಇಂಗಿತ ವ್ಯಕ್ತಪಡಿಸಿದರು.

ಕಾಂಟ್ರಾಕ್ಟರ್ ಮಗನಿಗೆ 12 ಚಿನ್ನದ ಪದಕ : ಬೆಳಗಾವಿಯ ಕೆಎಲ್ಇ ಡಾ. ಎಂ. ಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಾಹಿಲ್ ಮೋಹನ್ ಸೋಮನಾಚೆ 12 ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಈ ಕುರಿತು ಮಾತನಾಡಿದ ಅವರು, ''1 ಚಿನ್ನದ ಪದಕ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, 12 ಪದಕಗಳು ಸಿಕ್ಕಿವೆ. ಹಾಗಾಗಿ, ಬಹಳ ಸಂತೋಷ ಆಗುತ್ತಿದೆ. ದಿನಕ್ಕೆ ಅರ್ಧ ಗಂಟೆಯಿಂದ 1 ತಾಸು ಅಷ್ಟೇ ಓದುತ್ತಿದ್ದೆ. ನಮ್ಮ ತಂದೆ ಸಿವಿಲ್ ಇಂಜಿನಿಯರ್ ಕಾಂಟ್ರಾಕ್ಟರ್ ಇದ್ದಾರೆ. ಭವಿಷ್ಯದಲ್ಲಿ ಎಲ್ ಆಂಡ್ ಟಿ ಅಂತಾ ಕಂಪನಿ ತೆರೆಯುವ ಗುರಿ ಹೊಂದಿದ್ದೇನೆ. ಯಾವುದೇ ಕ್ಲಾಸ್ ಮಿಸ್ ಮಾಡಬಾರದು. ಮೊಬೈಲ್ ಬಿಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಚಿನ್ನದ ಪದಕ ಪಡೆಯುವುದು ತುಂಬಾ ಸುಲಭ'' ಎಂದು ತಮ್ಮ ಸಾಧನೆಯ ಗುಟ್ಟನ್ನು ಸಹ ಬಿಚ್ಚಿಟ್ಟರು.

ಮೇಡ್ ಇನ್ ಇಂಡಿಯಾ ಗುರಿ ಸಾಧನೆಗೆ ವಿಜ್ಞಾನ ತಂತ್ರಜ್ಞಾನದ ಕೊಡುಗೆ ಮುಖ್ಯ:ಅತ್ಯುತ್ತಮ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಗುರಿಯನ್ನು ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಮುಖ್ಯವಾಗಿದೆ ಎಂದು ರಾಜ್ಯಪಾಲ ಥಾವರಚಂದ್​ ಗೆಹ್ಲೋಟ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿ ದೇಶವನ್ನು ಮುಂಚೂಣಿಗೆ ತರುವಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವ ಹಾಗೂ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಾಂತ್ರಿಕ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.

ಮೂವರಿಗೆ ಡಾಕ್ಟರ್ ಆಫ್ ಸೈನ್ಸ್: ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ, ಬೆಂಗಳೂರು ಇಂಟರ್ ನ್ಯಾಶನಲ್ ಏರ್ ಪೋರ್ಟ್ ಲಿಮಿಟೆಡ್(ಬಿಐಎಎಲ್) ವ್ಯವಸ್ಥಾಪನಾ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರಿ ಕೆ ಮರಾರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು. ಇನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಡಾ‌. ಎಸ್. ಸೋಮನಾಥ್ ಅನುಪಸ್ಥಿಯಲ್ಲಿ ಅವರಿಗೂ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ :ಜು. 18 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ: ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ - VTU CONVOCATION

Last Updated : Jul 18, 2024, 8:08 PM IST

ABOUT THE AUTHOR

...view details