ಮೈಸೂರು :ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಕ್ರಮದ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದು ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ ದೇವೇಗೌಡ ಹೇಳಿದ್ದಾರೆ.
ಕುದೇರು ಶಾಖಾ ಮಠ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸೂರಜ್ ರೇವಣ್ಣ ಬಂಧನ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹೋ ಏನಾಗಿದೆ, ಅವರು ಹಗರಣದಲ್ಲಿ ಸಿಕ್ರಾ! ಹಾಗಾದ್ರೆ ಕಾದಿದೆ ಶಿಕ್ಷೆ ಬಿಡಿ, ಹೋ ಅರೆಸ್ಟ್ ಕೂಡ ಆದ್ರಾ, ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆಯಿಂದ ನಾನು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದೆ. ಬೆಳಗ್ಗೆ ಪತ್ರಿಕೆ, ಟಿವಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ತಪ್ಪು ಮಾಡಿದವರ ಪರ ನಾವು ಯಾವತ್ತೂ ನಿಲ್ಲಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ, ಯಾರೇ ತಪ್ಪು ಮಾಡಿದ್ರು ತಪ್ಪೇ. ಜನತಾದಳ ಯಾವತ್ತೂ ತಪ್ಪು ಮಾಡಿದವರ ಪರ ನಿಲ್ಲಲ್ಲ ಎಂದು ತಿಳಿಸಿದರು.
ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಏಕೆ ಮುಜುಗರ ?: ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೇ ಅದಕ್ಕೆ ಆರೂವರೆ ಕೋಟಿ ಜನ ಕಾರಣರಾ?. ಅಲ್ಲ ತಾನೆ. ಇದು ಕೂಡ ಹಾಗೆ ಎಂದರು. ಸೂರಜ್ ವಿರುದ್ಧ ಕ್ರಮದ ವಿಚಾರವಾಗಿ ಮಾತನಾಡಿ ಪಕ್ಷದೊಳಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.