ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿರುವುದು (ETV Bharat) ರಾಮನಗರ:ಯಾರು ಏನೇ ಟೀಕೆ ಮಾಡಲಿ. ನಾನು ಚನ್ನಪಟ್ಟಣ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಹಾಗೂ ಅಕ್ಕೂರು ಜಿ.ಪಂ.ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ನಡೆದ 'ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಇಲ್ಲಿ ಸಾವಿರಾರು ಜನರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಗಿ ಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. ಇದನ್ನು ನೋಡಿದರೆ ಅವರ ಪರಿಸ್ಥಿತಿ ಅರ್ಥವಾಗುತ್ತದೆ. ನನ್ನ ಬಗ್ಗೆ ಯಾರು ಏನೇ ಟೀಕೆ ಮಾಡಲಿ, ನನಗೆ ಈ ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಮುಖ್ಯ ಎಂದರು.
ಚನ್ನಪಟ್ಟಣದ ಬಡವರಿಗೆ ನಿವೇಶನ ನೀಡಲು 50 ಕೋಟಿ ಹಣ ತಂದು 50-100 ಎಕರೆ ಜಾಗದಲ್ಲಿ ಲೇಔಟ್ ಮಾಡುತ್ತೇವೆ. ಬಡವರಿಗೆ ಮನೆ ಕಟ್ಟಿ ಕೊಡಲಾಗುವುದು. ಕನಿಷ್ಠ 10 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ಆರ್ಥಿಕವಾಗಿ ಹಿಂದುಳಿದ ಜನರಿಗೆ ಬೀದಿ ವ್ಯಾಪಾರಿಗಳಿಗೆ ಹಾಗೂ ಕೊಳವೆ ಬಾವಿ ಕೊರೆಸಲು, ಹಂದಿ, ಹಸು, ಕುರಿ ಸಾಕುವವರಿಗೆ ನೀಡುವ 1 ಲಕ್ಷ ಸಾಲ ಸೌಲಭ್ಯವನ್ನು ಕನಿಷ್ಠ 10 ಸಾವಿರ ಜನರಿಗೆ ಕೊಡಿಸಲಾಗುವುದು. ಕಾವೇರಿ ನಿಗಮದಿಂದ ಇಲ್ಲಿ ಕೆನಾಲ್ ಮೂಲಕ ನೀರು ತರಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಕುಮಾರಸ್ವಾಮಿ ಅವರು ಕೇಂದ್ರದಿಂದ ಹಣ ತಂದು ಮಂಡ್ಯ ಜನರಿಗೆ ಉಚಿತ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ) ಹಾಕಿಸಲಿ ನೋಡೋಣ ಎಂದು ಸವಾಲು ಹಾಕಿದ ಶಿವಕುಮಾರ್, ದೊಡ್ಡ ನಾಯಕರೊಬ್ಬರು ನನಗೆ ಏನು ಮಾಡಿದ್ದೀರಿ ಎಂದು ಕೇಳಿದ್ದಾರೆ ಎಂದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಈಗ ಕಮಿಟಿ ರಚನೆ ಮಾಡಿದ್ದೇವೆ. ಸಾಕಷ್ಟು ಸಚಿವರು, ಶಾಸಕರು ಕಮಿಟಿಯಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಎಲ್ಲರೂ ಸೇರಿ ತೀರ್ಮಾನ ಮಾಡುತ್ತಾರೆ. ನಾನು ಸ್ಪರ್ಧೆ ಮಾಡಬೇಕು ಅಂದ್ರೂ ಅದನ್ನು ಕಮಿಟಿ ತೀರ್ಮಾನ ಮಾಡುತ್ತದೆ. ಒಂದು ವೇಳೆ ಕಮಿಟಿ ತೀರ್ಮಾನ ಮಾಡಿದ್ರೆ ನಾನು ಅಭ್ಯರ್ಥಿಯಾಗಬೇಕಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು.
ಮೂವರು ಡಿಸಿಎಂ ಚರ್ಚೆ ವಿಚಾರಕ್ಕೆ, ಈ ವಿಚಾರವನ್ನು ಪಾರ್ಟಿ ತೀರ್ಮಾನ ಮಾಡುತ್ತದೆ. ಯಾರು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಎಲ್ಲಾ ಸಮುದಾಯದವರನ್ನೂ ಡಿಸಿಎಂ ಮಾಡಲಿ ಯಾರು ಬೇಡ ಅಂದರು: ಡಿ. ಕೆ. ಸುರೇಶ್ - D K Suresh