ಚಿತ್ರದುರ್ಗ :ಐತಿಹಾಸಿಕ ಸಮಾವೇಶದ ಮೂಲಕ ಶೋಷಿತರನ್ನ ಒಗ್ಗೂಡಿಸುವ ಹೆಜ್ಜೆ ಹಾಕಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸಂದೇಶ ರವಾನಿಸಿದ್ದಾರೆ. ಶೋಷಿತರ ಸಮುದಾಯಗಳ ಸಮಾವೇಶದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಭಾಷಣ ಮಾಡಿ, ಕಳೆದುಕೊಂಡ ಹಕ್ಕುಗಳನ್ನು ಮುಂದಿನ ದಿನಗಳಲ್ಲಿ ಪಡೆಯುವುದು ಹೇಗೆ? ಎಂಬುದು ಸಮಾವೇಶದ ಉದ್ದೇಶ. ಸಾಕಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದೀವಿ. ಮುಂದಿನ ದಿನಗಳಲ್ಲಿ ಪಡೆಯಬೇಕೆಂದರೆ ಎಲ್ಲರೂ ಒಗ್ಗೂಡಬೇಕಿದೆ. ಎಲ್ಲವನ್ನೂ ಪಡೆಯಲು ಸಿಎಂ ನೇತೃತ್ವದಲ್ಲಿ ಸಮಾವೇಶ ಮಾಡ್ತಿದ್ದೇವೆ. ಸಿದ್ದರಾಮಯ್ಯ ಕೈಬಲ ಪಡಿಸಲು ನಾವು ಸೈನಿಕರ ರೀತಿ ನಿಲ್ಲಬೇಕಿದೆ ಎಂದು ತಿಳಿಸಿದ್ದಾರೆ.
ಸಿಎಂ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ-ದಿನೇಶ್ ಗುಂಡೂರಾವ್: ಕಾಂತರಾಜ್ ಅವರು ಮನೆ ಮನೆಗೆ ಹೋಗಿ ವರದಿ ತಯಾರಿಸಿದ್ದಾರೆ. ಯಾರೂ ಅದನ್ನು ನೋಡಿಲ್ಲ, ತಿಳಿದುಕೊಂಡಿಲ್ಲ. ಆದ್ರೂ ಅದರ ಪರ-ವಿರೋಧ ಚರ್ಚೆ ಆಗ್ತಿರುವುದು ವಿಪರ್ಯಾಸ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿ, ಐತಿಹಾಸಿಕ ತೀರ್ಮಾನಗಳನ್ನ ಯಾರಾದ್ರು ತೆಗೆದುಕೊಂಡಿದ್ದಾರೆ ಎಂದರೆ ಅದು ನಮ್ಮ ಸಿಎಂ ಸಿದ್ದರಾಮಯ್ಯ. ಕಳೆದ ಬಾರಿ ಅಷ್ಟು ಅಭಿವೃದ್ಧಿ ಮಾಡಿದ್ರು ನಮ್ಮ ಸರ್ಕಾರಕ್ಕೆ ಸೋಲು ಕೊಟ್ರು. ಅಪಪ್ರಚಾರ ಹಾಗೂ ತಪ್ಪು ತಿಳುವಳಿಕೆಯಿಂದ ಆ ಕೆಲಸವಾಯಿತು. ಈ ಬಾರಿ ಭಾರೀ ಬಹುಮತದಿಂದ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಿಮ್ಮ ಸರ್ಕಾರ ಬಂದಿದೆ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ನಾವು ಮಾಡ್ತೇವೆ ಎಂದಿದ್ದಾರೆ.
ಶೋಷಿತರನ್ನು ಮೇಲೆತ್ತಿದ್ದಾರೆ - ಸಚಿವ ಬಿ ನಾಗೇಂದ್ರ:ಶೋಷಿತರ ಸಮಾವೇಶದಲ್ಲಿ ಸಚಿವ ಬಿ. ನಾಗೇಂದ್ರ ಅವರು ಭಾಷಣ ಮಾಡಿ, ಸಿದ್ದರಾಮಯ್ಯನವರು ಚಾಮರಾಜನಗರದಿಂದ ಬೀದರ್ವರೆಗೆ ಇರುವ ಶೋಷಿತರನ್ನು ಮೇಲೆತ್ತಿದ್ದಾರೆ. ನನ್ನನ್ನು ಕೂಡಾ ಮುಖ್ಯವಾಹಿನಿಗೆ ತಂದವರು ಸಿದ್ದರಾಮಯ್ಯ ಎಂದು ತಿಳಿಸಿದ್ದಾರೆ.
ಸಾಧನೆಗಳನ್ನು ತೋರಿಸಿ ಜನರಲ್ಲಿ ಮತ ಕೇಳ್ತೀವಿ- ಜಮೀರ್ ಅಹ್ಮದ್ ಖಾನ್ :ನಮ್ಮ ಸಾಧನೆಗಳನ್ನ ತೋರಿಸಿ ಜನರಲ್ಲಿ ಮತ ಕೇಳ್ತೀವಿ. ಆದರೆ ಬಿಜೆಪಿಯವರು ಹಿಂದೂ, ಮುಸ್ಲಿಂ ಅಂತ ಜಾತಿ ಪಟ್ಟ ಕಟ್ಟಿ ರಾಜಕಾರಣ ಮಾಡ್ತಾರೆ. ಎಲ್ಲಾ ವರ್ಗದವರಿಗೂ ಜನಪರವಾಗಿ ಇರುವ ಪಕ್ಷ ಕಾಂಗ್ರೆಸ್ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಶೋಷಿತರ ಜಾಗೃತಿ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂತರಾಜ್ ವರದಿ ಬಿಡುಗಡೆಗಾಗಿ ಸಮಾವೇಶ ಆಯೋಜನೆ ಮಾಡಲಾಗಿದೆ. ಅದಕ್ಕೆ ನಾನು ಕೂಡ ಬೆಂಬಲ ನೀಡುತ್ತೇನೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಇಂದು ಸೇರಿದ್ದೀರಿ. ನಮ್ಮ ಸರ್ಕಾರ ಬಂದ ಮೇಲೆ ಬಡವರ ಪರ ಕಾರ್ಯ ಮಾಡ್ತಿದೆ. ಐದು ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದ್ದೇವೆ. ವಿರೋಧ ಪಕ್ಷದವರು ಗ್ಯಾರಂಟಿ ಜಾರಿ ಮಾಡಲ್ಲ ಅಂತ ಹೇಳಿದ್ರು. ಆದರೆ ನಾವು ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಕೆಲಸ ಮಾಡಿದ್ದಾರೆ. ಆರನೇ ಗ್ಯಾರಂಟಿ ಆಗಿ ಸ್ಲಂ ಬೋರ್ಡ್ನಲ್ಲಿರುವ ಜನರಿಗೆ ಮನೆಗಳನ್ನು ಕೊಡುವುದಾಗಿದೆ ಎಂದಿದ್ದಾರೆ.