ಕರ್ನಾಟಕ

karnataka

ETV Bharat / state

ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಸಂಕಲ್ಪ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಡಿ.ಕೆ.ಸುರೇಶ್​ ಸಂಕಲ್ಪ ಮಾಡಿದ್ದು, ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

d k shivakumar
ರಾಮನಗರ ಮಾದರಿ ಜಿಲ್ಲೆಯಾಗಿ ಮಾಡಲು ಸಂಕಲ್ಪ: ಡಿಸಿಎಂ ಡಿ.ಕೆ. ಶಿವಕುಮಾರ್

By ETV Bharat Karnataka Team

Published : Feb 12, 2024, 9:19 PM IST

ರಾಮನಗರ:ರಾಮನಗರವನ್ನು ಮಾದರಿ ಜಿಲ್ಲೆಯಾಗಿ ರೂಪುಗೊಳಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಇಂದು ನೂತನ ಅಶ್ವಮೇಧ ಬಸ್​ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಡಿ.ಕೆ.ಸುರೇಶ್ ಸಂಕಲ್ಪ ಮಾಡಿದ್ದಾರೆ. ಅವರ ಯೋಜನೆಗಳನ್ನು ಜಾರಿಗೊಳಿಸಲು ನಾನು, ಇಕ್ಬಾಲ್ ಹುಸೇನ್, ಬಾಲಕೃಷ್ಣ, ರವಿ ಸಂಪೂರ್ಣ ಸಹಕಾರ ನೀಡುತ್ತೇವೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತಿಸುತ್ತಿದ್ದೇವೆ. ಬಿಡದಿ ಹಾಗೂ ಆನೇಕಲ್​ವರೆಗೂ ಮೆಟ್ರೋ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ರಾಮನಗರ ಜಿಲ್ಲೆಗೆ ಯಾವ ಯಾವ ಇಲಾಖೆಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸುತ್ತೇನೆ ಎಂದರು.

ರಾಜ್ಯದಲ್ಲಿ ಬಸ್​ಗಳ ಕೊರತೆ ನೀಗಿಸಲು 1 ಸಾವಿರ ನೂತನ ಬಸ್​ಗಳ ನಿಯೋಜನೆ ಮಾಡಲಾಗುತ್ತಿದೆ. ನಾವು ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಈ ರೀತಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಹೇಳಿದರು.

ರಾಮಲಿಂಗಾರೆಡ್ಡಿ ಅವರು ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಕೂಡ ತಮ್ಮ ಸಾಕ್ಷಿಗುಡ್ಡೆ ಬಿಟ್ಟುಹೋಗಲು ರಾಮನಗರಕ್ಕೆ 100 ನೂತನ ಅಶ್ವಮೇಧ ಬಸ್​ಗಳನ್ನು ಮಂಜೂರಾತಿ ಮಾಡಿದ್ದಾರೆ. ಇಂದು 25 ಬಸ್​ಗಳನ್ನು ಉದ್ಘಾಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಬಸ್​ಗಳನ್ನು ವ್ಯವಸ್ಥೆ ಮಾಡಲಾಗುವುದು. ಬೇರೆ ಬಸ್​ಗಳಿಗಿಂತ ಈ ಬಸ್ ಸ್ವಲ್ಪ ಎತ್ತರವಾಗಿದೆ. ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗಲು ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ ನಮ್ಮ ರಾಜ್ಯದ ಸಾರಿಗೆ ವ್ಯವಸ್ಥೆ ಮಾದರಿಯಾಗಿದೆ ಎಂದು ತಿಳಿಸಿದರು.

ರಾಜ್ಯಪಾಲರ ಭಾಷಣದಲ್ಲಿ ಯಾವುದು ಸುಳ್ಳು?:ಕಾರ್ಯಕ್ರಮದ ನಂತರ ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದ ಮಹಿಳೆಯರಿಗೆ 2 ಸಾವಿರ ರೂ ಕೊಟ್ಟಿರುವುದು ಸುಳ್ಳಾ, ಉಚಿತ ಬಸ್​ ಸಂಚಾರ ಸುಳ್ಳಾ, ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದು ಸುಳ್ಳಾ? ಬಡವರಿಗೆ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ನೀಡುತ್ತಿರುವುದು ಸುಳ್ಳಾ? 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳಾ? ಎಂದ ಅವರು ಬಿಜೆಪಿಯವರು ರಾಮನ ಹೆಸರಲ್ಲಿ ಮತ ಕೇಳಲು ಹೊರಟಿದ್ದಾರೆ. ರಾಮ ಅವರ ಮನೆ ಆಸ್ತಿಯೇ? ರಾಮ ನಮ್ಮ ಆಸ್ತಿಯಲ್ಲವೇ? ನಾವು ಹಿಂದೂಗಳಲ್ಲವೇ? ಎಂದು ತಿರುಗೇಟು ನೀಡಿದರು.

ಡಿ.ಕೆ.ಸಹೋದರರನ್ನು ರಾಮನಗರದಲ್ಲಿ ಕಟ್ಟಿಹಾಕಲು ಬದ್ಧವೈರಿಗಳು ಒಂದಾಗಿದ್ದಾರೆ ಎಂಬ ಪ್ರಶ್ನೆಗೆ, ಅವರು ಏನಾದರೂ ಮಾಡಲಿ. ರಾಜ್ಯದ 28 ಸಂಸದರ ಪೈಕಿ ಸುರೇಶ್ ಮಾಡಿರುವ ಕೆಲಸ ಬೇರೆ ಯಾವುದೇ ಸಂಸದರು ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ ಎಂದು ತಿಳಿಸಿದರು.

ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ

ABOUT THE AUTHOR

...view details