ಶಿವಮೊಗ್ಗ:"ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ನಾವು ಈ ಬಾರಿಯ ಲೋಕಸಭಾ ಚುನಾವಣೆಗೆ ಮತ ಕೇಳುತ್ತೇವೆ" ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಗ್ಯಾರಂಟಿ ಜನರಿಗೆ ತಾತ್ಕಾಲಿಕವಾದದ್ದು. ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೌರವ ವಿಶ್ವಾಸ ಹೆಚ್ಚಾಗುತ್ತಿದೆ. ಈ ಬಾರಿ ಎನ್ಡಿಎ 400 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದೆ" ಎಂದರು.
ಕುಮಾರ ಬಂಗಾರಪ್ಪ ವಿಚಾರಕ್ಕೆ ಪ್ರತಿಕ್ರಿಯೆ:"ನಾನು ಕುಮಾರ ಬಂಗಾರಪ್ಪ ಅವರ ಜೊತೆ ಫೋನ್ನಲ್ಲಿ ಮಾತನಾಡಿದೆ. ಚುನಾವಣೆ ಬಂದಿರುವುದರಿಂದ ತಮ್ಮ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸ ಇದೆ. ಅವರ ವೈಯಕ್ತಿಕ ಕೆಲಸ ಕಾರ್ಯದಲ್ಲಿ ಬ್ಯೂಸಿಯಾಗಿದ್ದರು. ಚುನಾವಣೆ ವೇಳೆ ಸಕ್ರಿಯೆರಾಗುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ವಿಚಾರ:"ಚುನಾವಣೆ ವೇಳೆ ನಮ್ಮ ಶಕ್ತಿ ಎಂದರೆ ಅದು ನಮ್ಮ ಕಾರ್ಯಕರ್ತರು. ನರೇಂದ್ರ ಮೋದಿ ಅವರ ರಾಷ್ಟ್ರೀಯ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸೋದು. ಯುವಕರು, ರೈತರು, ಮಹಿಳೆಯರಿಗೆ ನೀಡಿರುವ ಯೋಜನೆಗಳನ್ನು, ಅಭಿವೃದ್ಧಿ ವಿಚಾರಗಳನ್ನು ಮತದಾರರಿಗೆ ತಿಳಿಸುತ್ತೇವೆ. ಈ ಬಾರಿ ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಗೆಲ್ಲಲು, ಬಿಜೆಪಿ ಮತ ಸೆಳೆಯುವ ಕೆಲಸ ಮಾಡಲಿದೆ" ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.