ಬೆಂಗಳೂರು/ದೆಹಲಿ:ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದು ಇದಕ್ಕಾಗಿ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ್ದಾರೆ.
ನವದೆಹಲಿಯಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ. ವಯನಾಡಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಬೆಂಗಳೂರಿನಲ್ಲಿರುವ ಎನ್ಡಿಆರ್ಎಫ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳು ತ್ವರಿತವಾಗಿ ತೆರಳಲು ಹಾಗೂ ಅಗತ್ಯ ಉಪಕರಣಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡಲು ನೆರವು ನೀಡಲಾಗಿದೆ.
ಎಂಇಜಿ ಯ ಒಬ್ಬರು ಅಧಿಕಾರಿ, ಇಬ್ಬರು ಜೆ.ಸಿ.ಓ. ಗಳು ಹಾಗೂ 70 ಮಂದಿ ವಿವಿಧ ರ್ಯಾಂಕಿನ ಸಿಬ್ಬಂದಿ ಈಗಾಗಲೇ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ 15 ವಾಹನಗಳಲ್ಲಿ ವಯನಾಡಿಗೆ ತೆರಳಿದ್ದಾರೆ. ಇನ್ನೂ ಇಬ್ಬರು ಅಧಿಕಾರಿಗಳು, ನಾಲ್ಕು ಮಂದಿ ಜೆ.ಸಿ.ಓ.ಗಳು ಹಾಗೂ 100 ಮಂದಿ ಸೇನಾ ಸಿಬ್ಬಂದಿ ರಕ್ಷಣಾ ಉಪಕರಣಗಳೊಂದಿಗೆ 40 ವಾಹನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ತಂಡಗಳು ವಯನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ, ಬಂಡಿಪುರ ಚೆಕ್ ಪೋಸ್ಟ್ನಲ್ಲಿ ಈ ಎನ್ಡಿಆರ್ಎಫ್ ಹಾಗೂ ಸೇನಾ ತಂಡಗಳಿಗೆ ಮತ್ತು ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್ ಕಾರಿಡಾರ್ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಒದಗಿಸಲಾಗುತ್ತಿದೆ. ಅಲ್ಲದೆ ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಸೂಕ್ತ ಬೆಂಬಲ ನೀಡುತ್ತಿದ್ದಾರೆ.
ವೈದ್ಯಕೀಯ ನೆರವು, ಆಸ್ಪತ್ರೆ ಸೌಲಭ್ಯ ಹಾಗೂ ಗಾಯಾಳುಗಳನ್ನು ಕರೆತರಲು ಬಸ್ಗಳನ್ನು ಹೆಚ್.ಡಿ. ಕೋಟೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಾಮರಾಜನಗರ ಜಿಲ್ಲಾಡಳಿತವೂ ಜಿಲ್ಲೆಯ ಗಡಿಭಾಗದಿಂದ ವಯನಾಡಿಗೆ ಆಗಾಗ ತೆರಳುವ ನಾಗರಿಕರ ನೆರವಿಗಾಗಿ ಸಹಾಯವಾಣಿ ಪ್ರಾರಂಭಿಸಿದೆ. ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ಸಿ. ಜಾಫರ್ (ಮೊಬೈಲ್ ಸಂಖ್ಯೆ 9448355577) ಹಾಗೂ ದಿಲೀಶ್ ಶಶಿ (9446000514) ಅವರನ್ನು ನಿಯೋಜಿಸಲಾಗಿದೆ.
ಕನ್ನಡಿಗರ ರಕ್ಷಣೆಗೆ ಪ್ರಯತ್ನ:ವಯನಾಡಿನಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಅವರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಭಾರಿ ಮಳೆ, ಪ್ರವಾಹ ಪರಿಸ್ಥಿತಿ: ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಖಡಕ್ ಸೂಚನೆ
ರಾಜ್ಯದಲ್ಲಿಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.