ಹುಬ್ಬಳ್ಳಿ:ನಲ್ ಜಲಮಿತ್ರ ಕಾರ್ಯಕ್ರಮದಡಿ ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ಪೈಪ್ ಮೂಲಕ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡಲು ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಐಟಿಐಗಳಂತಹ ಸರ್ಕಾರಿ ತರಬೇತಿ ಕೇಂದ್ರಗಳ ಮೂಲಕ ಪ್ಲಂಬಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳಲ್ಲಿ 17 ದಿನಗಳ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸರ್ಕಾರದ ಕಾರ್ಯಕ್ರಮಗಳ ನಿರ್ವಹಣೆಗೆ ಅನುಕೂಲವಾಗುವಂತೆ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಬಹುಕೌಶಲ್ಯ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿ ನಲ್‌ಜಲ ಕಾರ್ಯಕ್ರಮವನ್ನು ನಿರ್ವಹಿಸಲು ‘ನಲ್ ಜಲಮಿತ್ರ’ ಎಂಬ ಹೆಸರಿನಲ್ಲಿ ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ತಗಲುವ ವೆಚ್ಚವನ್ನು ಗ್ರಾಮ ಪಂಚಾಯಿತಿಗಳೇ ಭರಿಸುತ್ತಿವೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹುಬ್ಬಳ್ಳಿಯ ಜಿಟಿಟಿಸಿಯಲ್ಲಿ ಕೌಶಲ್ಯ ತರಬೇತಿ ಆರಂಭಿಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 44 ಸ್ವಸಹಾಯ ಗುಂಪಿನ ಮಹಿಳೆಯರಿಗೆ 512 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ. ನಂತರ, 23 ದಿನಗಳ ಕಾಲ ಉದ್ಯೋಗ ತರಬೇತಿ ನೀಡಲಾಗುತ್ತದೆ.
ಗ್ರಾಮ ಪಂಚಾಯತ್ ಪ್ರತೀ ಅಭ್ಯರ್ಥಿಗೆ 24,790 ರೂ ಪಾವತಿಸುತ್ತದೆ. ಇದನ್ನು ಗ್ರಾಮ 15ನೇ ಹಣಕಾಸು ಆಯೋಗ ಮತ್ತು ಇತರ ಅನುದಾನಗಳಿಂದ ಪೂರೈಸಬೇಕು. ತರಬೇತಿಯ ನಂತರ, ಮಹಿಳೆಯರು ಜಲಜೀವನ್ ಮಿಷನ್ ಯೋಜನೆಗಾಗಿ ಗ್ರಾಮ ಪಂಚಾಯಿತಿಯಲ್ಲಿ 'ನೀರು ವಿತರಣಾ ಆಪರೇಟರ್' ಆಗಿ ಕೆಲಸ ಮಾಡುತ್ತಾರೆ.
"ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 'ಹರ ಘರ್ ನಲ್'ನಲ್ಲಿ ಪ್ರತೀ ಮನೆಗೂ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳ ನಿರ್ವಹಣೆಗೆ ಪ್ರತೀ ಗ್ರಾಮ ಪಂಚಾಯಿತಿಯಿಂದ ಇಬ್ಬರಿಗೆ ತರಬೇತಿ ನೀಡಲಾಗುತ್ತಿದೆ. 44 ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. 17 ದಿನಗಳ ಕಾಲ ಬೇಸಿಕ್ ಪ್ಲಂಬಿಂಗ್, ಪೈಪ್ ಜೋಡಿಸುವುದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ" ಎಂದು ಹುಬ್ಬಳ್ಳಿ ಜಿಟಿಟಿಸಿಯ ಮುಖ್ಯಸ್ಥ ಮಾರುತಿ ಭಜಂತ್ರಿತಿಳಿಸಿದರು.