ಸಿಲಿಕಾನ್ ಸಿಟಿಯಲ್ಲಿ ತೀವ್ರ ಜಲಕ್ಷಾಮ ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮ ತೀವ್ರಗೊಂಡಿದ್ದು, ಶುದ್ಧ ನೀರಿನ ಘಟಕಗಳಲ್ಲೂ ಸಾಲು ಸಾಲಾಗಿ ನಿಲ್ಲುತ್ತಿರುವ ಜನರ ಸಂಖ್ಯೆ ದಿನೇ ದಿನೆ ಹೆಚ್ಚಾಗತೊಡಗಿದೆ.
ಜಲಮಂಡಳಿ ನೀರಿನ ಕೊರತೆಯಿಂದಾಗಿ ದಿನದ ಕೆಲವೇ ಹೊತ್ತು ಮಾತ್ರ ನೀರು ಬಿಡುಗಡೆ ಮಾಡುತ್ತಿದೆ. ಇದರಿಂದ ಜನರಿಗೆ ನೀರು ಸಿಗದೆ ಸಮಸ್ಯೆಯಾಗಿದೆ. ಇದರ ನಡುವೆಯೇ ನಗರದಲ್ಲಿರುವ ಕೆಲವು ಶುದ್ಧ ನೀರಿನ ಘಟಕಗಳಲ್ಲಿ ಕೂಡಾ ಜನರ ಸಂಖ್ಯೆ ದುಪ್ಪಟ್ಟು ಆಗಿದೆ.
ಈ ನಡುವೆ ನೀರಿನ ಕೊರತೆ ಮತ್ತು ಬೇಡಿಕೆಯ ಹೆಚ್ಚಳದಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಬೇಗನೆ ಮುಗಿದು ಹೋಗುತ್ತಿದೆ. ನೀರು ಬಂದು ಒಂದೆರಡು ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಹೀಗಾಗಿ ನೀರು ತುಂಬಿಸಿಕೊಳ್ಳಲು ದೊಡ್ಡ ಕ್ಯೂ ಕಾಣಿಸಿಕೊಳ್ಳುತ್ತಿದೆ. ಕೆಲವರಂತೂ ಗಂಟೆಗಟ್ಟಲೆ ಕಾದು ಕಾದು ಸುಸ್ತಾಗುತ್ತಿದ್ದಾರೆ.
ಹೆಚ್ಎಸ್ಆರ್ ಲೇಔಟ್ನ ವೆಂಕಟಾಪುರದಲ್ಲಿ ನೀರಿನ ತೀವ್ರ ಸಮಸ್ಯೆ ಕಾಣಿಸಿಕೊಂಡಿದೆ. ನೀರು ತುಂಬಿದ ಕೆಲವೇ ಗಂಟೆಗಳಲ್ಲಿ ಅದು ಮುಗಿಯುತ್ತಿದೆ. ತಮಗೆ ಸಿಗುತ್ತದೋ, ಇಲ್ಲವೋ ಎನ್ನುವ ಆತಂಕದಿಂದಲೇ ಜನರು ಕ್ಯೂ ನಿಲ್ಲುತ್ತಿದ್ದಾರೆ. ರಾಜಾಜಿ ನಗರದ ಭಾಗದಲ್ಲಿ ಕೂಡಾ ಶುದ್ಧ ಕುಡಿಯುವ ನೀರಿನ ಘಟಕದ ಎದುರು ನೂರಾರು ಜನರ ಸಾಲು ಕಾಣಿಸಿಕೊಳ್ಳುತ್ತಿದೆ.
ಬಸವನಗುಡಿಯಲ್ಲೂ ನೀರಿನ ಬವಣೆ : ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಬಸವನಗುಡಿಗೂ ಕೂಡ ಜಲದಾಹ ಎದುರಾಗಿದೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಗರ ಸುತ್ತಮುತ್ತ ನೀರಿಗೆ ಹಾಹಾಕಾರ ಎದ್ದಿದೆ. ಕಾವೇರಿ ನೀರು ಕೈಕೊಟ್ಟಿದ್ದು, ಬೋರ್ವೆಲ್ಗಳು ಬತ್ತಿಹೋಗಿವೆ, ಆರ್ಓ ಪ್ಲಾಂಟ್ಗಳಿಗೂ ಬೀಗ ಬಿದ್ದಿದೆ.
ಶ್ರೀನಗರದಲ್ಲಿರುವ ರಾಘವೇಂದ್ರ ಬ್ಲಾಕ್, ಕಾಳಿದಾಸ ಬಡಾವಣೆ ಸುತ್ತಮುತ್ತ ನೀರಿಲ್ಲದೇ ಜನ ಹೈರಾಣಾಗಿದ್ದಾರೆ. ಕಾವೇರಿ ನೀರು ಯಾವಾಗಲೋ ಒಮ್ಮೆ ಬರುತ್ತಿದೆ. ಇತ್ತ ಏರಿಯಾದಲ್ಲಿದ್ದ ಆರ್ ಓ ಪ್ಲಾಂಟ್ ಕೂಡ ಬಂದ್ ಆಗಿದ್ದು, ದುಬಾರಿ ಹಣ ಕೊಟ್ಟು ಟ್ಯಾಂಕರ್ ನೀರನ್ನು ಜನ ಪಡೆಯುತ್ತಿದ್ದಾರೆ. ನೀರಿಗಾಗಿ ದುಡ್ಡು ಸುರಿದು ಕಂಗಾಲಾಗಿದ್ದಾರೆ. ಇತ್ತ ನೀರಿಲ್ಲ ಎಂದು ಸ್ಥಳೀಯ ಶಾಸಕರ ಬಳಿ ಅಳಲು ತೋಡಿಕೊಂಡರೂ ಸ್ಪಂದನೆ ಸಿಗುತ್ತಿಲ್ಲ ಎಂದು ಜನರು ಗೋಗರೆಯುತ್ತಿದ್ದಾರೆ.
ನೀರಿಗಾಗಿ ದಿನವಿಡೀ ಕಾದು ಕಾದು ಜನ ಸುಸ್ತಾಗಿದ್ದಾರೆ. ನೀರು ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಇದ್ದ ಕೆಲ ಆರ್ಓ ಪ್ಲಾಂಟ್ಗಳು ಕೂಡ ನೀರಿಲ್ಲದೇ ಬಂದ್ ಆಗಿವೆ. ಕಾವೇರಿ ನೀರಿನ ಪೈಪ್ಲೈನ್ ಕೂಡ ಹೊಸ ಕಾಂಕ್ರೀಟ್ ರಸ್ತೆ ಮಾಡಿದಾಗ ಆಳಕ್ಕೆ ಸೇರಿರುವುದರಿಂದ ನೀರು ಕಡಿಮೆ ಬರುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಅತ್ತ ನೀರು ಯಾವಾಗ ಬರುತ್ತದೆ ಎಂದು ಕಾದು ಕುಳಿತ ಜನರು, ಇರುವ ಒಂದು ಬೋರ್ವೆಲ್ನಾದರೂ ರೀ ಬೋರ್ ಮಾಡಿಸಿದರೆ, ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಜನರು ತಮ್ಮ ಮನೆಯನ್ನು ಖಾಲಿ ಮಾಡಿರುವುದರಿಂದ ಟು ಲೆಟ್ ಬೋರ್ಡ್ಗಳು ರಾರಾಜಿಸುತ್ತಿವೆ. ಬಾಡಿಗೆದಾರರು ಮನೆ ಖಾಲಿ ಮಾಡುತ್ತಿರುವುದು ಮನೆ ಮಾಲೀಕರನ್ನ ಕಂಗಾಲಾಗಿಸಿದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ, ಮುಂದಿನ ದಿನಗಳು ಹೇಗೆ ಎಂದು ಜನ ಚಿಂತಾಕ್ರಾಂತರಾಗಿದ್ದಾರೆ.
ಟ್ಯಾಂಕರ್ ಮಾಫಿಯಾ :ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿರುವ ಹಿನ್ನೆಲೆ ಟ್ಯಾಂಕರ್ ಮಾಫಿಯಾ ತನ್ನ ಕರಾಳ ಮುಖವನ್ನು ತೋರಿಸಲು ಆರಂಭಿಸಿದೆ. ಒಂದು ಟ್ಯಾಂಕರ್ ನೀರಿಗೆ 2000 ರೂ. ದರ ವಿಧಿಸುತ್ತಿರುವ ಆರೋಪವೂ ಎದುರಾಗಿದೆ.
ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಲು ಜಲಮಂಡಳಿ ಮುಂದಾಗಿದ್ದು, ಇದರ ಭಾಗವಾಗಿ ಜಲಮಂಡಳಿ, ಬಿಬಿಎಂಪಿ ಮತ್ತು ಟ್ಯಾಂಕರ್ ಮಾಲೀಕರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಪ್ರತಿ ಟ್ಯಾಂಕರ್ಗೆ 600-700 ರೂಪಾಯಿ ನಿಗದಿಗೆ ಬಿಬಿಎಂಪಿ ಪಟ್ಟು ಹಿಡಿದಿದೆ. ಆದರೆ, ಟ್ಯಾಂಕರ್ ಮಾಲೀಕರು ಇದಕ್ಕೆ ಒಪ್ಪುತ್ತಿಲ್ಲ. ಈ ಬಗ್ಗೆ ನಡೆದ ಸಭೆಯಲ್ಲಿ ಒಮ್ಮತ ಮೂಡದೆ ಮುಂದೂಡಲಾಗಿದೆ.
ಒಂದು ಟ್ಯಾಂಕರ್ ನೀರಿಗೆ 1200 ರೂ. ನಿಗದಿ ಮಾಡುವಂತೆ ಟ್ಯಾಂಕರ್ ಅಸೋಸಿಯೇಷನ್ ಒತ್ತಾಯ ಮಾಡಿದೆ. ನಮಗೂ ನೀರು ಸಿಗುತ್ತಿಲ್ಲ. 700 ರೂಪಾಯಿಗೆ ಟ್ಯಾಂಕರ್ ನೀರು ನೀಡಲು ಸಾಧ್ಯವಿಲ್ಲ ಎಂದು ಟ್ಯಾಂಕರ್ ಮಾಲೀಕರು ಹೇಳುತ್ತಿದ್ದಾರೆ. ಹಾಗಿದ್ದರೆ ನೀವೇ ನೀರು ಕೊಡಿ, ನಾವು ನೀರು ಸರಬರಾಜು ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ನೀರಿನ ವಿಚಾರವಾಗಿ ಡಿಕೆಶಿ ಸಭೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಹಾರ ಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಬೆಂಗಳೂರಿಗೆ ಜಲಕ್ಷಾಮ; ಹಲವೆಡೆ ಹನಿ ನೀರಿಗೂ ಹಾಹಾಕಾರ