ಬೆಂಗಳೂರು:ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ನಗರದ ವಿವಿಧ ಸ್ಥಳಗಳಿಗೆ ಜಲಮಂಡಳಿ ಅಧಿಕಾರಿಗಳು ತೆರಳಿ ಸ್ಪಂದಿಸಿದ್ದಾರೆ. ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ಕೆಂಪೇಗೌಡನಗರದಲ್ಲಿ ನೀರಿನ ಸಮಸ್ಯೆಯ ಮಾಹಿತಿ ಅರಿಯುತ್ತಲೇ ಸ್ಥಳಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ದೌಡಾಯಿಸಿ ಬಗೆಹರಿಸಿದರು.
ಸ್ಥಳದಲ್ಲಿದ್ದ ಕೆಂಪೇಗೌಡ ಬಡಾವಣೆಯ ನಾಗರಿಕರೊಂದಿಗೆ ಚರ್ಚಿಸಿರುವ ಅಧಿಕಾರಿಗಳು ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ್ದಾರೆ. ಇನ್ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಮತ್ತೊಂದೆಡೆ, ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್ ಅವರು ಅಧಿಕಾರಿಗಳೊಂದಿಗೆ ಭಾರತಿನಗರಕ್ಕೆ ಭೇಟಿ ನೀಡಿ, ನೀರು ಸರಬರಾಜಿನ ವಾಸ್ತವ ಸ್ಥಿತಿ ಬಗ್ಗೆ ಪರಿಶೀಲಿಸಿದರು.
ನೀರಿನ ಪೈಪ್ಲೈನ್ ವ್ಯವಸ್ಥೆ ಹಾಗೂ ಸುಗಮ ಸರಬರಾಜು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿತ್ಯ ಯಾವುದೇ ರೀತಿಯ ಸಮಸ್ಯೆಯಾಗದ ನಿಟ್ಟಿನಲ್ಲಿ ಕ್ರಮವಹಿಸಲು ಸೂಚನೆ ನೀಡಿದರು.
ಅಂಬೇಡ್ಕರ್ ನಗರಕ್ಕೆ ಟ್ಯಾಂಕರ್ ನೀರು:ನಾಯಂಡಹಳ್ಳಿಯ ಪಂತರಪಾಳ್ಯದ ಅಂಬೇಡ್ಕರ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದನ್ನು ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿದರು. ಟ್ಯಾಂಕರ್ಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದರು. ಸಮಸ್ಯೆ ನಿವಾರಣೆ ಆಗುವವರೆಗೆ ಬಡಾವಣೆಗೆ ನಿತ್ಯ ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಅಶ್ವಾಸನೆ ನೀಡಿದರು.
ಜ್ಞಾನಭಾರತಿ ಬಳಿ ಪೈಪ್ ದುರಸ್ತಿ:ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಳಿ ಕುಡಿಯುವ ನೀರು ಸರಬರಾಜು ಮಾಡುವ ಒಂದು ಸಾವಿರ ಎಂಎಂ ವ್ಯಾಸದ ಪೈಪ್ಲೈನ್ ಹಾನಿಯಾಗಿತ್ತು. ಈ ವಿಚಾರ ಗೊತ್ತಾಗುತ್ತಲೇ ಸ್ಥಳಕ್ಕೆ ತೆರಳಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಕಾರ್ಮಿಕರೊಡಗೂಡಿ ನಿರಂತರ 4 ಗಂಟೆಗಳ ಕಾಲ ದುರಸ್ತಿಗೊಳಿಸಿದರು. ಈ ಮೂಲಕ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ನೀರು ಸರಬರಾಜು ಸಮಸ್ಯೆಯಾಗದಂತೆ ನೋಡಿಕೊಂಡರು.
''ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ಬರುವ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಜಲಮಂಡಳಿಯ 79 ಟ್ಯಾಂಕರ್ಗಳನ್ನು ಪಾಲಿಕೆಗೆ ಹಸ್ತಾಂತರಿಸಿದೆ. ನೀರಿಲ್ಲದ ಪ್ರದೇಶಗಳಿಗೆ ಹತ್ತಿರದ ನೀರಿನ ಘಟಕಗಳಿಂದ ತುಂಬಿಸಿಕೊಂಡು ಸರಬರಾಜು ಮಾಡಲಾಗುವುದು. ಕುಡಿಯುವ ನೀರಿನ ಅಭಾವವಿರುವ ಕಡೆ ಸಿಂಟೆಕ್ಸ್ ಟ್ಯಾಂಕ್ಗಳನ್ನು ಸ್ಥಾಪಿಸಿ, ಜಲಮಂಡಳಿ ಸಹಯೋಗದೊಂದಿಗೆ ಟ್ಯಾಂಕರ್ಗಳಿಂದ ಕುಡಿಯುವ ನೀರು ತುಂಬಿಸುವ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ'' ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
''35 ವಾರ್ಡ್ಗಳಲ್ಲಿನ 110 ಹಳ್ಳಿಗಳಲ್ಲಿ ಸಮಸ್ಯೆಯಿದ್ದರೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533ಗೆ ಕರೆ ಮಾಡಿ ತಿಳಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉಳಿದ ವಾರ್ಡ್ನವರು ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916ಗೆ ಮಾಹಿತಿ ನೀಡಬೇಕು. ಆಗ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ'' ಎಂದು ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ರಾಜಧಾನಿಯಲ್ಲಿ ನೀರಿನ ಅಭಾವ: ತೀವ್ರ ಸಂಕಷ್ಟಕ್ಕೆ ಸಿಲುಕಿದ ಪೀಣ್ಯ ಕೈಗಾರಿಕೆಗಳು