ಸಂಕೇಶ್ವರ ಪುರಾತನ ದೇವಸ್ಥಾನಕ್ಕೆ ಜಲದಿಗ್ಬಂಧನ (ETV Bharat) ಚಿಕ್ಕೋಡಿ:ಬೆಳಗಾವಿ ಜಿಲ್ಲೆಯಲ್ಲಿ ಮತ್ತು ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ದಿನ ಬಿಡದೆ ಮಳೆ ಸುರಿಯುತ್ತಿದೆ. ಈ ಮಳೆಗೆ ಹಿರಣ್ಯಕೇಶಿ ನದಿಯಲ್ಲಿ ಅಪಾರ ಪ್ರಮಾಣದ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನ ಜಲದಿಗ್ಬಂಧನವಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿಯಿಂದಿದಾಗಿ ದೇವಸ್ಥಾನ ಹಾಗೂ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರಕ್ಕೆ ಕಾರಣವಾಗಿದೆ. ಶಂಕರಲಿಂಗ ದೇವಸ್ಥಾನ ಈ ಭಾಗದಲ್ಲಿ ಪ್ರಸಿದ್ಧ ದೇವಾಲಯದಲ್ಲಿ ಒಂದಾಗಿದೆ. ಸಂಪೂರ್ಣವಾಗಿ ಶಿವಲಿಂಗ ಮುಳುಗಡೆ ಹೊಂದಿದರು ಸಹ ಅರ್ಚಕರು ನೀರಿನಲ್ಲಿಯೇ ದೇವರಿಗೆ ಮಂಗಳಾರತಿ ನೆರವೇರಿಸಿದ್ದಾರೆ.
ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಏರಿಕೆಯಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ಮನೆ ಕಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಮಳೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹೊಳೆಮ್ಮಾ ದೇವಸ್ಥಾನಕ್ಕೆ ನುಗ್ಗಿದ ಹಿರಣ್ಣಕೇಶಿ ನೀರು: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಹಿರಣ್ಯಕೇಶಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಪರಿಣಾಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಹೊಳೆಮ್ಮಾ ದೇವಸ್ಥಾನಕ್ಕೆ ನೀರು ನುಗ್ಗಿದೆ. ಮತ್ತೊಮ್ಮೆ ದೇವಾಲಯವು ಸಂಪೂರ್ಣ ಜಲಾವೃತವಾಗುವ ಆತಂಕ ಉಂಟಾಗಿದೆ.
ಓದಿ:ಪುಷ್ಯ ಮಳೆಗೆ ಮೈದುಂಬಿದ ಹೇಮಾವತಿ: ರಸ್ತೆಯಲ್ಲಿ ಮೊಣಕಾಲುದ್ದ ನೀರು, ಸಂಚಾರ ಅಸ್ತವ್ಯಸ್ತ - Hassan Rain Update