ಬೆಂಗಳೂರು:ಕಸದಿಂದ ವಿದ್ಯುತ್ ಉತ್ಪಾದಿಸುವ ಬಿಬಿಎಂಪಿ ಹಾಗೂ ಕೆಪಿಸಿಎಲ್‌ನ ಪ್ರಾಯೋಗಿಕ ಯೋಜನೆ ಬಹುತೇಕ ಯಶಸ್ವಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಘಟಕಕ್ಕೆ ಚಾಲನೆ ಸಿಗಲಿದೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಸಾಹಸಕ್ಕೆ ಕೈಹಾಕಲಾಗಿತ್ತು. ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿದ್ದು, ಘಟಕವನ್ನು ಉದ್ಘಾಟಿಸಲು ಎರಡೂ ಸಂಸ್ಥೆಗಳು ಮುಂದಾಗಿವೆ.
ನಿತ್ಯ 11.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಸದ್ಯ ಘಟಕದಲ್ಲಿ ನಿತ್ಯ 11.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇದರಿಂದಾಗಿ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆಗೆ ಪರಿಹಾರ ಸಿಗುವ ಜೊತೆಗೆ ಹೆಚ್ಚುವರಿ ವಿದ್ಯುತ್ ಲಭಿಸಲಿದೆ. ಈ ಹಿಂದೆ ಗೌರವ್ ಗುಪ್ತಾ ಬಿಬಿಎಂಪಿಯ ವಿಶೇಷ ಆಯುಕ್ತರಾಗಿದ್ದಾಗ ಈ ಚಿಂತನೆ ಪ್ರಾರಂಭವಾಗಿತ್ತು. ಆದರೆ ಆಗ ಹಲವು ಖಾಸಗಿ ಕಂಪನಿಗಳು ಹಿಂದೇಟು ಹಾಕಿದ್ದವು. ಬಳಿಕ ಕೆಪಿಸಿಎಲ್ ಸಹಯೋಗದಲ್ಲಿ ಈಗ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಹಿಂದೆ ಟೆಂಡರ್ ಕರೆದಾಗ ಎಂಟು ಕಂಪನಿಗಳು ಆಸಕ್ತಿ ತೋರಿದರೂ ಯಾರೂ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಸ್ಥಾವರವು ಸಂಪೂರ್ಣವಾಗಿ ತ್ಯಾಜ್ಯವನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಿದ್ದು, ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತದೆ.