ಮದುವೆ ಆಮಂತ್ರಣದಲ್ಲಿ ಮತದಾನ ಜಾಗೃತಿ ಹುಬ್ಬಳ್ಳಿ:ಲೋಕಸಭೆ ಚುನಾವಣಾ ಕಾವು ಏರುತ್ತಿದೆ. ಅಭ್ಯರ್ಥಿಗಳು ಕೂಡ ಮತದಾರರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದು, ಚುನಾವಣಾ ಆಯೋಗ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.
ಆದರೆ ಚುನಾವಣಾ ಆಯೋಗ ಮಾಡುವ ಕಾರ್ಯವನ್ನು ಭಾಂಡಗೆ ಬಂಧುಗಳು ಮಾಡಿದ್ದಾರೆ. ನಗರದ ರಾಮಕೃಷ್ಣ ಭಾಂಡಗೆ ಹಾಗೂ ಗಂಗೂಬಾಯಿ ಭಾಂಡಗೆ ದಂಪತಿ ತಮ್ನ ದ್ವಿತೀಯ ಸುಪುತ್ರ ವಿಶಾಲ ಮದುವೆ ಕಾರ್ಯವನ್ನು ಚನ್ನಪೇಟೆಯ ಎಸ್.ಎಸ್. ಕೆ ಹಾಲ್ನಲ್ಲಿ ಇಂದು ಇಟ್ಟುಕೊಂಡಿದ್ದು, ವಿವಾಹ ಆಮಂತ್ರಣ ಪತ್ರಿಕೆಯಲ್ಲಿ "ನನ್ನ ಮತ ನನ್ನ ಹಕ್ಕು" ಎಂಬ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದ್ದಾರೆ.
ಆತ್ಮೀಯ ಬಂಧುಗಳೇ,
"ಭವ್ಯ ಭಾರತದ ಪ್ರಜೆಗಳಾದ ನಾವುಗಳು ಈ ದೇಶದ ಏಕತೆಯ ಪ್ರತೀಕ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ. ನಮ್ಮ ದೇಶ ಪ್ರಜಾಪ್ರಭುತ್ವ, ಸಾರ್ವಭೌಮದ ಧೋತಕ. ನಮ್ಮೆಲ್ಲರ ಪವಿತ್ರ ಗ್ರಂಥ ಸಂವಿಧಾನ. ಈ ಸಂವಿಧಾನ ನಮಗೆ ಹಕ್ಕನ್ನು ನೀಡಿದೆ, ಬದುಕನ್ನು ಕೊಟ್ಟಿದೆ. ನಮ್ಮ ಹಕ್ಕು ಚಲಾಯಿಸಲು, ಬದುಕು ರೂಪಿಸಿಕೊಳ್ಳಲು ಸಂವಿಧಾನವೇ ನಮಗೆ ಆಧಾರ. ಅಂತಹ ಪವಿತ್ರ ಸಂವಿಧಾನದಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವವನ್ನು ನೀಡಲಾಗಿದೆ. ಪ್ರತಿಯೊಬ್ಬರು ಕಡ್ಡಾಯ ಮತದಾನದ ಮೂಲಕ ನಾವುಗಳು ನಮ್ಮ ಸೇವಕರನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಹೆಮ್ಮೆಯ ಸಂವಿಧಾನ ನಮಗೆ ಕಲ್ಪಿಸಿದೆ. ಇಂತಹ ಅವಕಾಶವನ್ನು ನಾವೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ವ್ಯಕ್ತಿಯ ಆಯ್ಕೆಯಲ್ಲಿ ನಮ್ಮ ಒಂದೊಂದು ಮತ ಕೂಡ ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲ ಕಡ್ಡಾಯ ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸೋಣ".
"ಬಂಧುಗಳೇ, ನಮ್ಮ ಮದುವೆ ಸಂಭ್ರಮದಲ್ಲಿ ತಾವೆಲ್ಲ ಸಾಕ್ಷಿಯಾಗಿದ್ದೀರಿ. ಮದುವೆ ಅಥವಾ ಹಬ್ಬದ ಸಂಭ್ರಮದಂತೆ ಮತದಾನ ದಿನವೂ ಕೂಡ ಪ್ರತಿಯೊಬ್ಬ ಪ್ರಜೆಯ ಸಂಭ್ರಮದ ದಿನವಾಗಬೇಕು. ಹೀಗಾಗಿ ತಾವೆಲ್ಲ ನಮ್ಮ ಕರೆಗೆ ಓಗೊಟ್ಟು ಬಂದು ನಮಗೆ ಹರಿಸಿ, ಆಶೀರ್ವದಿಸಿದಂತೆ ಮತದಾನದ ದಿನ ಮತಗಟ್ಟೆಗೆ ತೆರಳಿ ಕಡ್ಡಾಯ ಮತದಾನದ ಮೂಲಕ ಹಕ್ಕನ್ನು ಚಲಾಯಿಸಲು ಮನವಿ ಮಾಡಿದ್ದು, ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ".
ಇದನ್ನೂ ಓದಿ:'ರಕ್ತದಾನಿಗಳ ಗ್ರಾಮ'ವೆಂದೇ ಪ್ರಸಿದ್ಧಿ ಪಡೆದ ಹಾವೇರಿಯ ಜಲ್ಲಾಪುರ: ಪ್ರತಿ ಮನೆಯಲ್ಲೂ ಇಬ್ಬರು ದಾನಿಗಳು - Village Of Blood Donors