ಬೆಂಗಳೂರು/ಮೈಸೂರು:ವಿಧಾನ ಪರಿಷತ್ ಪದವೀಧರರು ಮತ್ತು ಶಿಕ್ಷಕರ 5 ಕ್ಷೇತ್ರಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಬೆಂಗಳೂರು, ಮೈಸೂರು ಹಾಗೂ ಕಲಬರಗಿಯಲ್ಲಿ ಎಣಿಕೆ ಕಾರ್ಯ ಅಂತ್ಯಗೊಂಡಿದೆ. ಮೈಸೂರು ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೂ ಜಯಭೇರಿ ಬಾರಿಸಿದರೆ, ಬೆಂಗಳೂರು ವ್ಯಾಪ್ತಿಯ ತಲಾ ಒಂದು ಪದವೀಧರ, ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
ಗುರುವಾರ ತಡರಾತ್ರಿವರೆಗೂ ಬೆಂಗಳೂರಿನ ಆರ್ಟ್ಸ್ ಕಾಲೇಜು ಮತಣಿಕೆ ಕೇಂದ್ರದಲ್ಲಿ ಪದವೀಧರ ಮತ್ತು ಒಂದು ಆಗ್ನೇಯ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ನಡೆದು, ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ರಾಮೋಜಿಗೌಡ ಹಾಗೂ ಶ್ರೀನಿವಾಸ್ ಜಯಶಾಲಿಗಳಾಗಿದ್ದಾರೆ. ಇತ್ತ, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಸತತ ಎರಡನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿಗೆ ಸೋಲು:ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ 24,888 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ 36,729 ಮತ ಪಡೆದು ಜಯ ಸಾಧಿಸಿದರು. ಚಲಾವಣೆಯಾದ 80,080 ಮತಗಳನ್ನು ಆರು ಸುತ್ತುಗಳಲ್ಲಿ ಎಣಿಕೆ ಮಾಡಲಾಗಿದೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಿದರು. 8,482 ಮತಗಳು ಅಸಿಂಧುಗೊಂಡವು.
ತ್ರಿಕೋನ ಸ್ಪರ್ಧೆ:ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ 8,909 ಮತಗಳಿಂದ ಗೆದ್ದಿದ್ದು, ಹಾಲಿ ಸದಸ್ಯ ನಾರಾಯಣಸ್ವಾಮಿ ಸೋಲುಂಡರು. ಚಲಾವಣೆಯಾದ 24,106 ಮತಗಳನ್ನು ಏಳು ಸುತ್ತುಗಳಲ್ಲಿ ಎಣಿಕೆ ನಡೆಸಲಾಯಿತು. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಗೆದ್ದರು. 704 ಮತಗಳು ತಿರಸ್ಕೃತಗೊಂಡವು. ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ 7,142 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ, ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ 6,894 ಮತ ಪಡೆದಿದ್ದಾರೆ. ಬಿಜೆಪಿಯ ತೆಕ್ಕೆಯಲ್ಲಿದ್ದ ಈ ಎರಡೂ ಕ್ಷೇತ್ರಗಳು ಇದೀಗ ಕಾಂಗ್ರೆಸ್ ಪಾಲಾಗಿವೆ.
ಮೂರು ಕ್ಷೇತ್ರಗಳಲ್ಲಿ ಮೈತ್ರಿಗೆ ಜಯ:ವಿಧಾನಷರಿಷತ್ನ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರ ಕ್ಷೇತ್ರಗಳ ಮತ ಎಣಿಕೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿ ಮಧ್ಯರಾತ್ರಿಯವರೆಗೆ ನಡೆಯಿತು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಗೆದ್ದರೆ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೋಜೇಗೌಡ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿ ಧನಂಜಯ ಸರ್ಜಿ ಜಯಶಾಲಿಯಾದರು. ಈ ಮೂರು ಕ್ಷೇತ್ರಗಳಲ್ಲಿಯೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಅಭ್ಯರ್ಥಿಗಳ ಗೆಲುವಿನ ಅಂತರ: ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ 10,823 ಮತ ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ನ ಮರೀತಿಬ್ಬೇಗೌಡ 6201 ಮತ ಗಳಿಸಿ, 4,622 ಮತಗಳ ಅಂತರದಿಂದ ಸೋಲುಂಡರು. ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದ ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಈ ಹಿಂದೆ 4 ಬಾರಿ ಗೆದ್ದಿದ್ದ ಮರಿತಿಬ್ಬೇಗೌಡರನ್ನು ಸೋಲಿಸಿ, ಪ್ರಥಮ ಸಲ ಪರಿಷತ್ ಪ್ರವೇಶ ಮಾಡುತ್ತಿದ್ದಾರೆ.