ಬೆಂಗಳೂರು:ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವ ದೂರದೃಷ್ಟಿಯ ಬಜೆಟ್ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಇಂದು ಮಂಡನೆಯಾದ ಭಾರತ್ ಬಜೆಟ್ ಅನ್ನು ಸ್ವಾಗತಿಸಿದ್ದಾರೆ.
ಪ್ರಮುಖವಾಗಿ ನಮ್ಮ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಾಧ್ಯಮ ವಲಯದ ಉದ್ಯಮಗಳ ಸಬಲೀಕರಣದ ಸಾಕಾರದ ಗುರಿ ಸಾಧಿಸಲು ಈ ಬಜೆಟ್ ಉಪಯುಕ್ತವಾಗಲಿದೆ. ಪ್ರಗತಿನಿಷ್ಠ ಮಾರ್ಗಸೂಚಿ, ರಫ್ತಿಗೆ ಆದ್ಯತೆ, ಹೂಡಿಕೆ ಸ್ನೇಹಿ ಮತ್ತು ಸುಧಾರಣಾ ಕ್ರಮಗಳು, ಪರಿವರ್ತನೆಯ ನೀತಿಗಳ ಮೂಲಕ ಸಶಕ್ತ, ಸಮಗ್ರ ಅಭಿವೃದ್ಧಿಯನ್ನು ಬಜೆಟ್ 2025-26 ಖಾತರಿಪಡಿಸುತ್ತಿದೆ. ಇದು ಉದ್ಯಮಸ್ನೇಹಿ ಬಜೆಟ್ ಆಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಿದೆ ಎಂದು ಬಿಎಸ್ವೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣ, ಕೇಂದ್ರ-ರಾಜ್ಯ ಸಹಯೋಗಗಳಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 2025ರಲ್ಲಿ ಕ್ಷಯರೋಗ ನಿರ್ಮೂಲನೆಯ ಗುರಿ ಸೇರಿದಂತೆ ಆರೋಗ್ಯ ಸೇವಾ ವಲಯಕ್ಕೆ ಕಾಯಕಲ್ಪ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸ ಪದ್ಧತಿಯಡಿಯಲ್ಲಿ ಬಂಡವಾಳ ಲಾಭದಂತಹ ವಿಶೇಷ ಆದಾಯ ಹೊರತುಪಡಿಸಿ, 12 ಲಕ್ಷ ರೂ. ಆದಾಯದವರೆಗೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಕ್ರಮ ಮಾಧ್ಯಮ ವರ್ಗಗಳಿಗೆ ಹೆಚ್ಚಿನ ಆರ್ಥಿಕ ಬಲವನ್ನು ನೀಡಲಿದೆ. ಒಟ್ಟಿನಲ್ಲಿ ಈ ಸಾಲಿನ ಬಜೆಟ್ ಸ್ವಾವಲಂಬನೆ, ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ಮುನ್ನಡೆಯಲು ಭಾರತವನ್ನು ಸಶಕ್ತಗೊಳಿಸಿದೆ ಎಂದಿದ್ದಾರೆ.
ಉತ್ತುಮ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಿಎಸ್ವೈ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:12 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ: ಕೇಂದ್ರ ಬಜೆಟ್‌ನಲ್ಲಿ ಘೋಷಣೆ - INCOME TAX SLABS
ಕೇಂದ್ರ ಬಜೆಟ್ ಸಂಬಂಧ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಡವರು, ಮಧ್ಯಮ ವರ್ಗದವರಿಗೆ ಅತಿ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಟ್ಟಿರುವ ಈ ಬಜೆಟ್ ರಾಷ್ಟ್ರದ ಜನತೆಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ವರ್ಗಗಳಿಗೆ, ಕಾರ್ಖಾನೆ, ಸ್ಟಾರ್ಟಪ್‌ಗಳನ್ನು ಮಾಡುವವರಿಗೆ 20,000 ಕೋಟಿ ರೂ. ಸಾಲವಾಗಿ ಕೊಡುವ, ಅನುದಾನ ಕೊಡುವ ಪ್ರಸ್ತಾವ ಸ್ವಾಗತಾರ್ಹ. ಹಿಂದೆಂದೂ ಇಲ್ಲದಂತಹ ಈ ಪ್ರಸ್ತಾವದಿಂದ ಪರಿಶಿಷ್ಟ ಜಾತಿ ವರ್ಗದವರಿಗೆ, ವಿಶೇಷವಾಗಿ ಯುವಕರಿಗೆ ಬಹಳ ಅನುಕೂಲ ಆಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ರೂಪಿಸಲು ಅಗತ್ಯವಿರುವ ಕ್ರಮಗಳನ್ನು ಈ ಬಜೆಟ್‌ನಲ್ಲಿ ಕೈಗೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತರನ್ನು ಗಮನದಲ್ಲಿರಿಸಿ ಆ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವ ಒತ್ತು ಕೊಟ್ಟಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಿ, ಐಐಟಿ ಓದುವವರಿಗೆ 6 ಸಾವಿರ ಸೀಟುಗಳನ್ನು ಹಾಗೂ 10 ಸಾವಿರ ಮೆಡಿಕಲ್ ಸೀಟುಗಳನ್ನು ಹೆಚ್ಚಳ ಮಾಡಿದ್ದಾರೆ ಎಂದು ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷ ಎಂದರೆ ಮಧ್ಯಮ ವರ್ಗದ- ವೇತನದಾರರಿಗೆ ಮೊದಲು 7 ಲಕ್ಷಕ್ಕೆ ತೆರಿಗೆ ಕಟ್ಟಬೇಕಿತ್ತು. ಈಗ 12 ಲಕ್ಷದವರೆಗೆ ಯಾರಿಗೂ ತೆರಿಗೆ ಇರುವುದಿಲ್ಲ. ತಿಂಗಳಿಗೆ 1 ಲಕ್ಷ ರೂಪಾಯಿವರೆಗೆ ಸಂಬಳ ಪಡೆಯುವವರಿಗೆ ವಿನಾಯಿತಿ ಸಿಕ್ಕಿದೆ. 18 ಲಕ್ಷ ಆದಾಯ ಇರುವವರಿಗೆ 70,000 ರೂ. ಮಾತ್ರ ತೆರಿಗೆ. 25 ಲಕ್ಷದವರೆಗೆ ವೇತನದವರಿಗೆ 1.20 ಲಕ್ಷ ತೆರಿಗೆ ಬರುತ್ತದೆ. ಎಲ್ಲರನ್ನೂ ಸರಿದೂಗಿಸಿಕೊಂಡು ಆತ್ಮನಿರ್ಭರ ಭಾರತವನ್ನು ಮಾಡುವಂಥ ಮಹಾನ್ ಕಾರ್ಯಕ್ಕೆ ಪ್ರಧಾನಿ ಮೋದಿ ಅವರ ಸರ್ಕಾರ ಈ ಬಜೆಟ್‌ನಲ್ಲಿ ಒತ್ತು ನೀಡಿದೆ. ವಿಕಸಿತ ಭಾರತವಾಗಿ, 4ನೇ ಅತಿದೊಡ್ಡ ಆರ್ಥಿಕತೆ ಆಗಿ ಬೆಳೆಯುವುದಕ್ಕೆ ವಿತ್ತ ಸಚಿವೆ ಪರಿಪೂರ್ಣ ಶ್ರಮ ಹಾಕಿದ್ದಾರೆ ಎಂದು ಹೇಳಿದರು.