ಕರ್ನಾಟಕ

karnataka

ETV Bharat / state

ಮೈಸೂರು: ಮತದಾನ ಜಾಗೃತಿಗೆ ವಿಂಟೇಜ್ ಕಾರ್ ರ‍್ಯಾಲಿ - Vintage car rally - VINTAGE CAR RALLY

ಮತದಾನ ಜಾಗೃತಿ ಮೂಡಿಸಲು ಮೈಸೂರು ನಗರದಲ್ಲಿ ವಿಂಟೇಜ್ ಕಾರ್‌ಗಳ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

vintage-car-rally-to-create-voter-awareness-organised-in-mysuru
ಮೈಸೂರು: ಮತದಾನ ಜಾಗೃತಿಗೆ ವಿಂಟೇಜ್ ಕಾರ್ ರ‍್ಯಾಲಿ

By ETV Bharat Karnataka Team

Published : Apr 6, 2024, 3:34 PM IST

Updated : Apr 6, 2024, 4:23 PM IST

ಮೈಸೂರು: ಮತದಾನ ಜಾಗೃತಿಗೆ ವಿಂಟೇಜ್ ಕಾರ್ ರ‍್ಯಾಲಿ

ಮೈಸೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದಲ್ಲಿ ವಿಂಟೇಜ್ ಕಾರ್‌ಗಳ ರ‍್ಯಾಲಿಯನ್ನು ನಡೆಸಲಾಯಿತು. ಪುರಭವನದಿಂದ ಆರಂಭವಾದ ರ‍್ಯಾಲಿಯು ಡಿ. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯ ಮೂಲಕ ಪುರಭವನ ಬಳಿ ಅಂತ್ಯಗೊಂಡಿತು. ಹಲವು ದಶಕಗಳ ಹಿಂದಿನ ಕಾರ್‌ಗಳು ಸಾರ್ವಜನಿಕರ ಗಮನಸೆಳೆದವು.

ಮೆರವಣಿಗೆಗೆ ಹಸಿರುನಿಶಾನೆ ತೋರಿದ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆಲ್ಲರೂ ಯಜಮಾನರು. ಪ್ರಜ್ಞಾವಂತ ಮತದಾರರು ಈ ದೇಶದ ಆಸ್ತಿ. ಅರ್ಹ ಮತದಾರರೆಲ್ಲರೂ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಈ ಮೂಲಕ ಜನತಂತ್ರ ಹಬ್ಬದ ಮೆರುಗು ಹೆಚ್ಚಿಸಬೇಕು. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು ಮತದಾನ ನಡೆಯಲಿದೆ. ಜನರು ಯಾವುದೇ ರೀತಿಯ ಚುನಾವಣಾ ಅಕ್ರಮದಲ್ಲಿ ಭಾಗಿಯಾಗದೇ ನೈತಿಕ ಮತದಾನವನ್ನು ಮಾಡಬೇಕು. ಬೇರೆಯವರಿಗೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಶೇ.70ರಷ್ಟು ಮತದಾನವಾಗಿತ್ತು. ಈ ಬಾರಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮತದ ಮೌಲ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ಎಷ್ಟೋ ಜನರು ಅಕ್ಷರಸ್ಥರಾಗಿದ್ದರು ಸಹ ಮತದಾನದ ವಿಷಯದಲ್ಲಿ ಪ್ರಜ್ಞಾವಂತರಾಗಿರುವುದಿಲ್ಲ. ಅಂತಹವರಿಗೂ ಸಹ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಸ್ವೀಪ್ ಸಮಿತಿ ಮಾಡುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ಕಡ್ಡಾಯವಾಗಿ ಮತ ಹಾಕಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್​ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎನ್. ಎನ್. ಮಧು ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ:ಮದ್ಯಪ್ರಿಯರಿಗೆ ಮತದಾನ‌ ಜಾಗೃತಿ: ರಾಜಕಾರಣಿಗಳ ಮದ್ಯದಂಗಡಿಗಳ ಮೇಲೆ ಕಟ್ಟೆಚ್ಚರ - Voting Awareness

Last Updated : Apr 6, 2024, 4:23 PM IST

ABOUT THE AUTHOR

...view details