ಹಾವೇರಿ:ಈ ಬಾರಿಯಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಗೆಲ್ಲಲಿದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಇಂದು ಚುನಾವಣಾ ಪ್ರಚಾರ ಕುರಿತು ಮಾತನಾಡಿದ ಅವರು, 'ಹೋದ ಬಾರಿ ಮೋದಿ ಅಲೆ ಇತ್ತು. ಈಗ ಮೋದಿ ಅಲೆ ಬಹಳ ಕಡಿಮೆ ಇದೆ. ಬಿಜೆಪಿಯವರು ಕೊಟ್ಟ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ, ನುಡಿದಂತೆ ನಡೆದಿಲ್ಲ' ಎಂದು ಟೀಕಿಸಿದರು.
ಇನ್ನು, ಹುಬ್ಬಳ್ಳಿಯ ಬಿವಿವಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರ ಕುರಿತಂತೆ ಮಾತನಾಡಿದ ವಿನಯ್ ಕುಲಕರ್ಣಿ, 'ಚುನಾವಣೆಗೆ ಯಾವುದೇ ಪಕ್ಷಕ್ಕೆ ಸಂಬಂಧ ಇರದ ವಿಚಾರ ಅದು. ನೇಹಾ ತಂದೆ ನಿರಂಜನ ಹಿರೇಮಠ ನನ್ನ ಆತ್ಮೀಯ ಗೆಳೆಯ. ನಾವೆಲ್ಲಾ ಒಟ್ಟಿಗೆ ಕೂಡಿ ಬೆಳೆದವರು. ಅವರ ಮಗಳಿಗಾಗಿರುವುದು ನಮ್ಮ ಮಕ್ಕಳಿಗೆ ಆದ ಹಾಗೆ' ಎಂದು ಬೇಸರ ವ್ಯಕ್ತಪಡಿಸಿದರು. ಈ ರೀತಿಯ ಪ್ರಕರಣಗಳನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ.. ಇಂತಹ ಘಟನೆ ನಡೆದಾಗ ಸರ್ಕಾರ ಏನು ಎಲ್ಲಾ ಕಡೆ ಕಾಯೋಕೆ ಆಗುತ್ತಾ?. ಒಂದು ಪಕ್ಷಕ್ಕೆ ಗೂಬೆ ಕೂರಿಸುವುದು ಸರಿಯಲ್ಲ. ಇದು 200% ಖಂಡಿಸೋ ಘಟನೆ. ಆ ಸಮಾಜವೂ ಇದನ್ನು ಖಂಡಿಸಿದೆ' ಎಂದರು.