ಮೈಸೂರು: ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ನಿಧನರಾಗಿದ್ದಾರೆ. ಅವರಿಗೂ ಸಾಂಸ್ಕೃತಿಕ ನಗರಿಗೂ ಅವಿನಾಭಾವ ಸಂಬಂಧವಿತ್ತು. ಮೈಸೂರಿನ ಜೊತೆಗೆ ಅವರ ಸಂಬಂಧದ ಕುರಿತು ಕಳೆದ 22 ವರ್ಷಗಳಿಂದ ಕೃಷ್ಣ ಅಭಿಮಾನಿ ಬಳಗ ಕಟ್ಟಿ, ಅವರ ಹುಟ್ಟುಹಬ್ಬದಂದು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ವಿಕ್ರಾಂತ್ ಪಿ.ದೇವೇಗೌಡ ಈಟಿವಿ ಭಾರತದ ಜೊತೆ ಮಾತನಾಡಿದರು.
"1997ರಿಂದ ನಾವು ಎಸ್.ಎಂ.ಕೃಷ್ಣ ಅಭಿಮಾನಿ. ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದೆವು. ನನ್ನ ಮಗ ಎಂಎಸ್ ಮಾಡಲು ಲಂಡನ್ಗೆ ಹೋದಾಗ ವಿದೇಶಾಂಗ ಸಚಿವರಾಗಿದ್ದರು. ಆಗ ಇವರು ವಿದೇಶಕ್ಕೆ ತೆರಳಿದ್ದರು. ಅಲ್ಲಿ ಅಂಬಾಸಿಡರ್ ಅವರನ್ನು ಕರೆದು, ಇವರು ನಮ್ಮ ಹುಡುಗ ನೋಡಿಕೊಳ್ಳಿ ಎಂದಿದ್ದರು" ಎಂದು ನೆನೆದರು.
ಎಸ್.ಎಂ.ಕೃಷ್ಣ ವ್ಯಕ್ತಿತ್ವದ ಕುರಿತು ವಿಕ್ರಾಂತ್ ಪಿ ದೇವೇಗೌಡ ಮಾತು (ETV Bharat) "ಮುಖ್ಯಮಂತ್ರಿಯಾಗಿದ್ದು ನಮ್ಮ ಮಕ್ಕಳ ಮದುವೆಗೆ ಬಂದು ಸರಳತೆ ಮರೆದಿದ್ದರು. ವಿಕ್ರಾಂತ್ ಟೈರ್ ಕಂಪನಿ ಬರಬೇಕಾದರೆ ಅವರೇ ಕಾರಣ. ಮಂಡ್ಯ–ಮೈಸೂರು ಯುವಕರಿಗೆ ಉದ್ಯೋಗ ಸೃಷ್ಠಿಯ ದೂರದೃಷ್ಟಿ ಇಟ್ಟುಕೊಂಡಿದ್ದರು" ಎಂದರು.
ಇನ್ಫೋಸಿಸ್, ರಿಂಗ್ ರಸ್ತೆ, ಬಿಸಿಯೂಟ, ಕೂಲಿಗಾಗಿ ಕಾಳು ಯೋಜನೆಗಳನ್ನು ತಂದರು. ಮೈಸೂರು – ಬೆಂಗಳೂರು ರಸ್ತೆಗೆ ಟೋಲ್ಗೆ ತಮ್ಮ ರಾಜ್ಯದ ಬೊಕ್ಕಸದಿಂದಲೇ ಹಣ ಕೊಟ್ಟರು ಎಂದು ಹೇಳಿದರು.
ವಿಕ್ರಾಂತ್ ಪಿ.ದೇವೇಗೌಡರ ಮಗನ ಮದುವೆ ಸಮಾರಂಭದಲ್ಲಿ ಎಸ್.ಎಂ.ಕೃಷ್ಣ (ETV Bharat) "1992ರಲ್ಲಿ ಮೈಸೂರಿನ ಕಾಸ್ಮಾಪೋಲೀಟಿನ್ ಕ್ಲಬ್ ಮೆಂಬರ್ ಆಗಿದ್ದೆ. ಆಗ ಸಿಲ್ವರ್ ಜ್ಯೂಬಿಲಿ ಫಂಕ್ಷನ್ಗೆ ಅತಿಥಿಯಾಗಿ ಆಹ್ವಾನಿಸಲು ಹೋದಾಗಲೇ ನನ್ನ ಅವರ ಮೊದಲ ಭೇಟಿ. ದಿವಂಗತ ಶ್ರೀನಿವಾಸ್ ಪುಸ್ತಕ ಬಿಡುಗಡೆ ಹಾಗೂ ಮತ್ತೊಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಮಾರಂಭ ಅವರ ಕೊನೆಯ ಕಾರ್ಯಕ್ರಮ" ಎಂದರು.
ಎಸ್.ಎಂ.ಕೃಷ್ಣ ಅವರೊಂದಿಗೆ ವಿಕ್ರಾಂತ್ ಪಿ.ದೇವೇಗೌಡ (ETV Bharat) "2002ರಲ್ಲಿ ಎಸ್.ಎಂ.ಕೃಷ್ಣ ಸಂಘ ಸ್ಥಾಪನೆಯಾಯಿತು. ಆಗ ಅವರು ಬೇಡ ಎಂದು ತಡೆದರು. ಯಾರಿಂದಲೂ ಚಂದ ತೆಗೆದುಕೊಳ್ಳುವುದು ಬೇಡ. ಬಡವರಿಗೆ, ದೀನ ದಲಿತರಿಗಾಗಿ ಏನಾದ್ರೂ ಸಹಾಯ ಮಾಡೋಣ ಎಂದು ಮುಂದಾದರು. ಸಂಘದಲ್ಲಿ ಆಡಂಬರ ಮಾಡಿಲ್ಲ. ಜನಪರ ಕಾರ್ಯಕ್ರಮಗಳು ನಡೆದಿವೆ. ದೇವರು ನಮಗೆ ನೀಡಿದ ಶಕ್ತಿಯಲ್ಲಿ ಕಾರ್ಯಕ್ರಮಗಳು ನಡೆದಿವೆ. ದೆಹಲಿಯಿಂದ ವಿದೇಶಾಂಗ ಸಚಿವರಾಗಿದ್ದಾಗಲೂ ಪತ್ರ ಬರೆದು ಕಾರ್ಯಕ್ರಮಕ್ಕೆ ಶುಭ ಕೋರುತ್ತಿದ್ದರು. ಎಸ್.ಎಂ.ಕೃಷ್ಣ ಅವರು ಅಗಲಿರುವ ಸುದ್ಧಿ ಮುಂಜಾನೆ 4 ಗಂಟೆಗೆ ಗೊತ್ತಾಯಿತು. ಆಗಿನಿಂದಲೂ ನಮಗೆ ಏನು ಮಾತನಾಡಬೇಕು ಎಂಬುದೇ ಗೊತ್ತಾಗಿಲ್ಲ ಎಂದು ಭಾವುಕರಾದರು.
ಇದನ್ನೂ ಓದಿ:ಎಸ್.ಎಂ.ಕೃಷ್ಣ ಅವರ ಡ್ರೆಸ್ ಸೆನ್ಸ್, ಫ್ಯಾಷನ್ ಪ್ರೀತಿ, ಸ್ಟೈಲ್ ಹೇಗಿತ್ತು ಗೊತ್ತಾ?