ಬೆಂಗಳೂರು: "ವಿಕ್ರಂ ಗೌಡ ಒಬ್ಬ ನಕ್ಸಲ್. ನಮ್ಮಲ್ಲಿ ನಕ್ಸಲ್ ನಿಗ್ರಹ ಪಡೆ ಇದೆ. ಇದು ನಕಲಿ ಎನ್ಕೌಂಟರ್ ಅಲ್ಲ. 20 ವರ್ಷಗಳಿಂದ ಆತನ ಚಟುವಟಿಕೆಗಳನ್ನು ಗಮನಿಸಿದ್ದಾರೆ. 60ಕ್ಕೂ ಹೆಚ್ಚು ಕೇಸ್ಗಳು ಆತನ ಮೇಲಿವೆ. ಕಾನೂನುಬಾಹಿರ ಮಷಿನ್ ಗನ್ ಕ್ಯಾರಿ ಮಾಡುತ್ತಿದ್ದ. ಅದಕ್ಕಾಗಿ ಈ ಘಟನೆ ನಡೆದಿದೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಕ್ರಂ ಗೌಡ ಅವರದ್ದು ನಕಲಿ ಎನ್ಕೌಂಟರ್ ಎಂಬ ಟೀಕೆಗೆ ಪ್ರತಿಕ್ರಿಯಿಸಿ, "ನ್ಯಾಯಯುತ ಪ್ರತಿಭಟನೆಗೆ ಅವಕಾಶವಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಕೈಜೋಡಿಸಿ. ಪಾವಗಡದಲ್ಲೂ ನಕ್ಸಲರು ಜನರನ್ನು ಕೊಂದಿದ್ದರು. ಆಗಲೂ ನಾವು ಮನವಿ ಮಾಡಿಕೊಂಡೆವು. ನೂರು ಜನ ಶಸ್ತ್ರ ತ್ಯಜಿಸಿ ಶರಣಾದರು" ಎಂದರು.
ಮಹಾರಾಷ್ಟ್ರದಲ್ಲಿ ಗೆಲ್ಲುತ್ತೇವೆ:ಮಹಾರಾಷ್ಟ್ರ ಎಕ್ಸಿಟ್ ಪೋಲ್ ಕುರಿತು ಮಾತನಾಡಿ, "ಕೆಲವರು ಮಹಾ ಅಘಾಡಿಗೆ 162 ಸೀಟು ಕೊಟ್ಟಿದ್ದಾರೆ. ಕೆಲವರು ಮಹಾಯುತಿಗೆ ಹೆಚ್ಚು ಸೀಟು ಕೊಟ್ಟಿದ್ದಾರೆ. ಯಾವುದನ್ನು ನಿಖರವಾಗಿ ಹೇಳಲಾಗಲ್ಲ. ಅಲ್ಲಿ ಆಂಬ್ಯುಲೆನ್ಸ್ ಖರೀದಿಯಲ್ಲಿ 8,000 ಕೋಟಿ ರೂ. ಅಕ್ರಮ ಆರೋಪ ಇದೆ. ಈ ಬಗ್ಗೆ ವರದಿಯಾಗಿದೆ. ಅಂಬೇಡ್ಕರ್ ಪ್ರತಿಮೆ ಮಾಡುತ್ತೇವೆ ಅಂದ್ರು, 2015ರಲ್ಲಿ ಶಂಕು ಸ್ಥಾಪನೆ ಮಾಡಿದ್ರು. ಆದರೆ ಅದನ್ನು ಇದುವರೆಗೆ ಮಾಡಿಲ್ಲ ಎಂಬ ಅಸಮಾಧಾನ ಇದೆ. ಮಹಾರಾಷ್ಟ್ರಕ್ಕೆ ಬಂದ ಕಂಪನಿಯನ್ನು ಗುಜರಾತ್ಗೆ ಕಳುಹಿಸಿದ್ರು ಎಂಬ ಬೇಸರವಿದೆ. ಮತ್ತೊಂದು ಕಂಪನಿಯೂ ಗುಜರಾತ್ಗೆ ಹೋಗಿದೆ. ಕೇಂದ್ರದ ಮೇಲೆ ಯುವಕರಿಗೆ ಸಿಟ್ಟಿದೆ. ಸಾಲಮನ್ನಾ ಸೇರಿ ರೈತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ವಿಪರೀತ ಭ್ರಷ್ಟಾಚಾರ ಅಲ್ಲಿದೆ ಎಂಬ ಆರೋಪವಿದೆ. ಇದರ ಅಧಾರದಲ್ಲಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ" ಎಂದು ಹೇಳಿದರು.