ಬೆಂಗಳೂರು:''ಜನರ ತೆರಿಗೆ ಹಣದಲ್ಲಿ ನಾವು ಸದನ ನಡೆಸುತ್ತೇವೆ. ಅದಕ್ಕೆ ನಾವು ಬೆಲೆ ಕೊಡಬೇಕು'' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಒಂದು ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. ಆದರೆ, ಇತ್ತೀಚೆಗೆ ಅಧಿವೇಶನದ ಬಗ್ಗೆ ಯಾರಿಗೂ ಇಂಟರೆಸ್ಟ್ ಇಲ್ಲ'' ಎಂದರು. ''ಎಲ್ಲಿವರೆಗೆ ಹಣ ಕೊಟ್ಟು ವೋಟ್ ಹಾಕಿಸಿಕೊಳ್ಳುವವರು, ಹಣ ಪಡೆದು ಓಟು ಹಾಕುವವರು ಇರುತ್ತಾರೋ ಅಲ್ಲಿವರೆಗೆ ಈ ವ್ಯವಸ್ಥೆ ಬದಲಾಗಲ್ಲ. ಇದು ಕಟು ಸತ್ಯ. ಆದರೆ, ಶಾಸನ ಸಭೆಗಳು ಉತ್ತಮವಾಗಿ ನಡೆಯುವಂತಾಗಬೇಕು. ಆದರೆ, ಆ ರೀತಿ ಅದು ನಡೆಯಲಿಲ್ಲ, ನಡೆಯುತ್ತಿಲ್ಲ ಅನ್ನೋ ಬೇಸರ ನನಗಿದೆ'' ಎಂದು ಹೇಳಿದರು.
''ಹಿಂದೆ ಗ್ರಾಮ ಪಂಚಾಯ್ತಿ ವಿಚಾರವಾಗಿ ಕೇಳಿದ ಪ್ರಶ್ನೆಯೊಂದರ ಮಾಹಿತಿ ಕಲೆ ಹಾಕಲು 96 ಸಾವಿರ ಖರ್ಚಾಗಿತ್ತು. ಆದರೆ, ಅಂತಹ ವಿಚಾರಗಳ ಬಗ್ಗೆ ಸೂಕ್ತ ಚರ್ಚೆ ಆಗುತ್ತಿರಲಿಲ್ಲ. ಆಗಲ್ಲ ಅನ್ನೋದು ಬೇಸರದ ವಿಚಾರ'' ಎಂದರು. ''ಸದನಕ್ಕೆ 27 ಮಂದಿ ಹೊಸ ಸದಸ್ಯರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ತರಬೇತಿ ಕೊಡುವ ಕೆಲಸ ಮಾಡುತ್ತೇವೆ. ಈ ಹಿಂದೆ ನಡೆಯುತ್ತಿದ್ದ ವಿಧಾನ ಪರಿಷತ್ ಕಲಾಪವನ್ನು ಈಗ ತರಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದರು.
ವಿಧಾನಸಭೆಯ ಸ್ಪೀಕರ್ ಪೀಠದ ಮುಂದೆ ಫೋಟೊ ತೆಗೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಸದನ ಪವಿತ್ರವಾದುದ್ದು, ಸದನ ನಡೆಯುತ್ತಿರುವಾಗ, ಪೀಠದಲ್ಲಿ ಸ್ಪೀಕರ್ ಇದ್ದಾಗ ಹೊರಗಿನವರು ಫೋಟೋ ತೆಗೆಯಬಾರದು. ಪೀಠಕ್ಕೆ ಅವಮಾನ ಮಾಡಿದಂತಾಗುತ್ತದೆ. ಪೀಠದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕು. ಪೀಠದಲ್ಲಿ ಸಭಾಧ್ಯಕ್ಷರು ಇಲ್ಲದ ವೇಳೆ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ'' ಎಂದರು.