ಮಂಗಳೂರು: ಅಕ್ಟೋಬರ್ 21 ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬಿಜೆಪಿ, ಕಾಂಗ್ರೆಸ್ ಮತ್ತು ಎಸ್ಡಿಪಿಐ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಮಂಗಳವಾರ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಇಂದು ಮೂರು ಅಭ್ಯರ್ಥಿಗಳ ನಾಮಪತ್ರ ಸೇರಿ ಒಟ್ಟು ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.
ಬಿಜೆಪಿಯಿಂದ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್ನಿಂದ ರಾಜು ಪೂಜಾರಿ ಮತ್ತು ಎಸ್ಡಿಪಿಐನಿಂದ ಅನ್ವರ್ ಸಾದತ್ ಬಜತ್ತೂರು ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ (ETV Bharat) ನಾಮಪತ್ರ ಸಲ್ಲಿಕೆಗೆ ಮುನ್ನ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, "ಸಾಮಾನ್ಯ ಕಾರ್ಯಕರ್ತನಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ದೊಡ್ಡ ಜವಾಬ್ದಾರಿ ಸಿಕ್ಕಿದೆ. ಜವಾಬ್ದಾರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಸಮಸ್ಯೆಗಳಿಗೆ ಸ್ಪಂದಿಸುವ ಉತ್ಸುಕತೆ ನನ್ನಲ್ಲಿದೆ. ಅದೇ ರೀತಿ ಕೆಲಸ ಮಾಡುತ್ತೇನೆ" ಎಂದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, "ನಾನು 20 ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಗ್ರಾಪಂ, ತಾಪಂ ಸದಸ್ಯನಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಅನುಭವ ಹೊಂದಿದ್ದೇನೆ. ಸ್ಥಳೀಯ ಸಂಸ್ಥೆಗಳ ಎಲ್ಲಾ ಸಮಸ್ಯೆಗಳ ಅರಿವು ನನಗಿದೆ. ಆದ ಕಾರಣ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಇದೆ" ಎಂದರು.
ಇದನ್ನೂ ಓದಿ:ವಿಧಾನ ಪರಿಷತ್ ಚುನಾವಣೆ: ಸ್ವತಂತ್ರ ಅಭ್ಯರ್ಥಿಯಿಂದ ಮೊದಲ ನಾಮಪತ್ರ ಸಲ್ಲಿಕೆ - Council Election Nomination