ಶಿವಮೊಗ್ಗ:ಮಲೆನಾಡಿನಿಂದ ಕುಂಭಮೇಳದ ಪ್ರಯಾಗ್ರಾಜ್ಗೆ ಹೋಗಿದ್ದ ಶಿವಮೊಗ್ಗದ ಯಾತ್ರಿಗಳು ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ. ಏಳು ಜನರಿದ್ದ ತಂಡದ ಸದಸ್ಯರು ವಿಡಿಯೋ ಮೂಲಕ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ - ಶಿವಮೊಗ್ಗ ಭಕ್ತರು; "ಶಿವಮೊಗ್ಗದಿಂದ ಏಳು ಜನರ ತಂಡ ಮಹಾಕುಂಭಕ್ಕೆ ಬಂದಿದ್ದೇವೆ. ನಾವು ಮೊದಲು ಅಯೋಧ್ಯೆಗೆ ಹೋಗಿ, ಅಲ್ಲಿಂದ ವಾರಾಣಾಸಿಗೆ ಬಂದೆವು. ವಾರಾಣಾಸಿಯಿಂದ ಪ್ರಯಾಗ್ರಾಜ್ಗೆ ರೈಲಿನಲ್ಲಿ ಬರಲು ಬುಕಿಂಗ್ ಮಾಡಿದಾಗ ಸೀಟು ಸಿಗದೆ ಇದ್ದುದರಿಂದ ನಾವು ಕ್ಯಾಬ್ನಲ್ಲಿ ಬಂದೆವು. ಇಲ್ಲಿ ನಾವು ಬಂದಾಗ ಟ್ರಾಫಿಕ್ ಜಾಮ್ ಉಂಟಾಯಿತು. ಇಲ್ಲಿ ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಒಂದು ಪಾಯಿಂಟ್ಗೆ ಕರೆದುಕೊಂಡು ಬಿಡುತ್ತಾರೆ. ಅಲ್ಲಿಂದ ಕುಂಭಮೇಳದ ಬಳಿಗೆ ಸ್ಥಳೀಯರು ತಮ್ಮ ತಮ್ಮ ವಾಹನದಲ್ಲಿ ಕರೆದುಕೊಂಡು ಬಿಡುತ್ತಾರೆ. ಇಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ. ಎಲ್ಲಾರು ಬರಬಹುದು. ಕಾಲ್ತುಳಿತ ಆಯಿದೆಂದು ಮಾಹಿತಿ ಬಂತು. ಆದರೆ ಈಗ ಎಲ್ಲಾ ಚೆನ್ನಾಗಿದೆ. ಎಲ್ಲಾ ಕಡೆ ಊಟ ಕಾಫಿ, ಟೀ ಸಿಗುತ್ತಿದೆ" ಎಂದು ತಮ್ಮ ಅನುಭವವನ್ನು ನಂದ ಜಗದೀಶ್ ಹಂಚಿಕೊಂಡಿದ್ದಾರೆ.
ನಾಗ ಸಾಧುಗಳ ಪ್ರವಚನ ಚೆನ್ನಾಗಿರುತ್ತೆ; ಇನ್ನೊಬ್ಬ ಯಾತ್ರಿಯಾದ ಅಶೋಕ್ ಬೇದ್ರೆ, "ಕುಂಭ ಮೇಳದಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ. ಇಲ್ಲಿಗೆ ಬರುವ ತನಕ ನಾವು ವಾಹನದ ವ್ಯವಸ್ಥೆ ಚೆನ್ನಾಗಿ ಮಾಡಿಕೊಳ್ಳಬೇಕು. ಇಲ್ಲಿ ಸ್ನಾನ ಮಾಡಲು, ನೀರು, ವಸತಿ ಚೆನ್ನಾಗಿದೆ. ಇಲ್ಲಿನ ಸರ್ಕಾರ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದೆ. ಇನ್ನೂ 5 ಕೋಟಿ ಜನ ಬಂದರೂ ಸಹ ಅವರಿಗೆ ಎಲ್ಲಾ ವ್ಯವಸ್ಥೆ ಇದೆ. ಇಂತಹ ಕುಂಭಮೇಳವನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ. ನಾಗ ಸಾಧುಗಳನ್ನು ನೋಡಿ ಆಶೀರ್ವಾದ ಪಡೆಯಬಹುದು. ಅವರ ಪ್ರವಚನ ಚೆನ್ನಾಗಿರುತ್ತದೆ. ಎಲ್ಲಾರು ಕುಂಭಮೇಳಕ್ಕೆ ಬಂದು ಕಣ್ತುಂಬಿಕೊಳ್ಳಿ" ಎಂದು ವಿನಂತಿಸಿಕೊಂಡಿದ್ದಾರೆ.