ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ನಟ ದರ್ಶನ್ ವಿಡಿಯೋ ಕರೆಯಲ್ಲಿ ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಜಾಮರ್ ಅಳವಡಿಸಿದ್ದರೂ ನೆಟ್‌ವರ್ಕ್ ಹೇಗೆ ಲಭ್ಯವಾಯಿತು ಎಂಬುದರ ಕುರಿತು ಟೆಲಿಕಾಂ ಕಂಪನಿಗಳಿಂದ ವಿವರ ಪಡೆದು ವರದಿ ಸಲ್ಲಿಸುವಂತೆ ಕಾರಾಗೃಹದ ಮುಖ್ಯ ಅಧೀಕ್ಷರಿಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಪತ್ರ ರವಾನಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೋ ಕರೆ: ಟೆಲಿಕಾಂ ಕಂಪನಿಗಳಿಗೆ ನೋಟಿಸ್ ನೀಡಿ ವರದಿ ಸಲ್ಲಿಸಲು ಸೂಚನೆ - Notice to telecom companies - NOTICE TO TELECOM COMPANIES
ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಸಿದ್ದರೂ, ಮೊಬೈಲ್ ನೆಟ್‌ವರ್ಕ್ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಎಲ್ಲಾ ಟೆಲಿಕಾಂ ಕಂಪೆನಿಗಳಿಂದ ವಿವರಣೆ ಪಡೆದು ಸೆ.4ರೊಳಗೆ ವರದಿ ಸಲ್ಲಿಸುವಂತೆ ಡಿಜಿಪಿ ಸೂಚಿಸಿದ್ದಾರೆ.
Published : Aug 31, 2024, 6:45 AM IST
ಆಗಸ್ಟ್ 25ರಂದು ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ ಜೈಲಿನಲ್ಲಿರುವ ಆರೋಪಿ ದರ್ಶನ್ ವಿಡಿಯೋ ಕರೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈಗಾಗಲೇ ಯಾವುದೇ (Airtel, BSNL, Vi & Jio) ಸಿಗ್ನಲ್‍ಗಳು ದೊರಕದಂತೆ ಜಾಮರ್ ಉಪಕರಣಗಳನ್ನು ಅಳವಡಿಸಲಾಗಿದೆ. ಕಾರಾಗೃಹದ ಎಲ್ಲ ಬ್ಯಾರಕ್, ಸೆಲ್, ಆವರಣಗಳನ್ನು ಪ್ರತಿದಿನ ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದೇ ಸಿಗ್ನಲ್‍ಗಳು ಲಭ್ಯವಾಗುತ್ತಿಲ್ಲ. ಅದಾಗ್ಯೂ ಸಹ ಆರೋಪಿ ದರ್ಶನ್ ವಿಡಿಯೋ ಕರೆಯಲ್ಲಿ ಭಾಗಿಯಾಗಿರುವುದು ಹಾಗೂ ಫೋಟೋ ಹಂಚಿಕೊಂಡಿರುವುದು ಗಂಭೀರ ವಿಷಯವಾಗಿದೆ. ಹಾಗೂ ಕಾರಾಗೃಹದಲ್ಲಿ ಮೊಬೈಲ್ ಸಿಗ್ನಲ್ ದೊರಕುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನೋಟಿಸ್ ನೀಡಿ ಸಿಗ್ನಲ್ ಹೇಗೆ ದೊರೆಯಿತು ಎಂಬುದರ ವಿವರಣೆ ಪಡೆದು ಸೆಪ್ಟೆಂಬರ್ 4ರ ಒಳಗಡೆ ವರದಿ ನೀಡುವಂತೆ ಪತ್ರದ ಮೂಲಕ ಕಾರಾಗೃಹ ಇಲಾಖೆಯ ಮುಖ್ಯ ಅಧೀಕ್ಷರಿಗೆ ಸೂಚಿಸಲಾಗಿದೆ.